11:45 AM Tuesday 8 - September 2026

ಭೂಮಿಯ ಮಾಲಕನಂತೆ ನಟಿಸಿ 1 ಎಕರೆ ಜಾಗ ಮಾರಾಟಕ್ಕೆ ಯತ್ನ: ಆರೋಪಿಯ ಬಂಧನ

arest
25/08/2026

ಬೆಳಗಾವಿಯಲ್ಲಿ ಮೂಲ ಮಾಲೀಕರಂತೆ ನಟಿಸಿ ಬೇರೆಯವರ ಕೃಷಿ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಯತ್ನಿಸಿದ್ದ ವಂಚಕನೊಬ್ಬನನ್ನು ಮಾರ್ಕೆಟ್ ಠಾಣಾ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಖಾನಾಪುರ ತಾಲೂಕಿನ ಸೋನಾರವಾಡಿ ಗ್ರಾಮದ ಖಾಚು ಆನಂದ ಮೋರೆ (64) ಬಂಧಿತ ಆರೋಪಿಯಾಗಿದ್ದಾನೆ.

ಪ್ರಕರಣದ ಹಿನ್ನೆಲೆ ನೋಡುವುದಾದರೆ, ಬೆಳಗಾವಿಯ ಉದ್ಯಮಭಾಗ ಬಡಮಂಜಿ ಮಾಲಾ ನಿವಾಸಿ ಚಂದ್ರಕಾಂತ ರಾಮಚಂದ್ರ ಬಡಮಂಜಿ ಅವರು ಉಚಗಾಂವ ಹೋಬಳಿ ಕಡೋಲಿ ಗ್ರಾಮದ ಸರ್ವೇ ನಂಬರ್ 60/*/13ರ ಒಟ್ಟು 1 ಎಕರೆ ಜಮೀನನ್ನು ಗಣಪತಿ ಶಂಕರ ಗವಳಿ ಮತ್ತು ಮಾರುತಿ ದೇವಜಿ ಗವಳಿ ಎಂಬುವರಿಂದ ಕಾನೂನುಬದ್ಧವಾಗಿ ಖರೀದಿಸಿದ್ದರು. ಆ ಜಮೀನು ಸಂಪೂರ್ಣವಾಗಿ ಚಂದ್ರಕಾಂತ ಅವರ ಕಬ್ಜಾದಲ್ಲೇ ಇತ್ತು. ಆದರೆ ದುಷ್ಟ ಉದ್ದೇಶ ಹೊಂದಿದ್ದ ಆರೋಪಿ ಖಾಚು ಮೋರೆ ಆ ಜಮೀನಿಗೆ ಕನ್ನ ಹಾಕಲು ಸಂಚು ರೂಪಿಸಿದ್ದನು.

2025ರ ಜುಲೈ 17ರಂದು ಬೆಳಗಾವಿ ದಕ್ಷಿಣ ಉಪ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ನಕಲಿ ಖರೀದಿ ಪತ್ರ ನೋಂದಣಿ ಮಾಡಿಸಿ, ಸದರಿ 1 ಎಕರೆ ಕೃಷಿ ಜಮೀನನ್ನು ಬೇರೆಯವರಿಗೆ ಸೇಲ್ ಡೀಡ್ ಮಾಡಿಕೊಟ್ಟಿರುವುದಾಗಿ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಂತ್ರಸ್ತ ಚಂದ್ರಕಾಂತ ಬಡಮಂಜಿ ಅವರು 2025ರ ಡಿಸೆಂಬರ್ 3ರಂದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಬಿ.ಎನ್.ಎಸ್-2023 ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಎಸಿಪಿ ಸಂತೋಷ ಸತ್ಯನಾಯಿಕ ಹಾಗೂ ಪಿಐ ಜೆ.ಎಮ್.ಕಾಲಿಮಿರ್ಚಿ ಅವರ ನೇತೃತ್ವದಲ್ಲಿ ಆರೋಪಿ ಖಾಚು ಆನಂದ ಮೋರೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಇಡೀ ವಂಚನೆಯ ಜಾಲ ಬಹಿರಂಗಗೊಂಡಿದ್ದು, ಸೋಮವಾರ ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಸುಳ್ಳು ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡುವ ಇಂತಹ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ತಮ್ಮ ಆಸ್ತಿಗಳ ಮೇಲೆ ನಿಗಾ ವಹಿಸಬೇಕು. ಹಾಗೆಯೇ ಆಸ್ತಿ ಖರೀದಿಸುವವರು ಕೂಡ ಮೂಲ ಮಾಲೀಕರು ಯಾರು ಎಂಬುದನ್ನು ಸಂಪೂರ್ಣವಾಗಿ ಖಚಿತಪಡಿಸಿಕೊಂಡೇ ಮುಂದುವರಿಯಬೇಕು ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ. ಅಲ್ಲದೆ, ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪಿಐ ಜೆ.ಎಮ್.ಕಾಲಿಮಿರ್ಚಿ, ಪಿಎಸ್ಐ ಮಣಿಕಂಠ ಪೂಜಾರಿ, ಪಿಎಸ್ಐ ಹೆಚ್.ಎಲ್.ಕೆರೂರ ಹಾಗೂ ಪೊಲೀಸ್ ಸಿಬ್ಬಂದಿಗಳ ತಂಡವನ್ನು ನಗರ ಪೊಲೀಸ್ ಆಯುಕ್ತರು ವಿಶೇಷವಾಗಿ ಪ್ರಶಂಸಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

mobil chat sitesi
Exit mobile version