ಟ್ರಂಪ್ ಜೊತೆ ಮಾತುಕತೆ ನಡೆಸುವ ತಂಡದಲ್ಲಿ ಮಾನಸಿಕ ತಜ್ಞರನ್ನೂ ನೇಮಿಸಿಕೊಂಡ ಇರಾನ್!

trump.jpg
17/06/2026

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡವಳಿಕೆಯನ್ನು ವಿಶ್ಲೇಷಿಸಲು ಇರಾನ್ ಸರ್ಕಾರವು ತನ್ನ ರಾಜತಾಂತ್ರಿಕ ಸಲಹಾ ಸಮಿತಿಗೆ ಇಬ್ಬರು ಹಿರಿಯ ಮನಶ್ಶಾಸ್ತ್ರಜ್ಞರನ್ನು (Psychologists) ನೇಮಿಸಿಕೊಂಡಿತ್ತು ಎಂಬ ಆಘಾತಕಾರಿ ವಿಷಯ ಇತ್ತೀಚಿನ ವರದಿಯಿಂದ ಬಹಿರಂಗವಾಗಿದೆ.

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ನಡೆದ ಪರೋಕ್ಷ ಮಾತುಕತೆಯ ವೇಳೆ, ಡೊನಾಲ್ಡ್ ಟ್ರಂಪ್ ಅವರ ಮಾನಸಿಕ ನಡವಳಿಕೆ ಹಾಗೂ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಲು ಇರಾನ್ ಇಬ್ಬರು ಹಿರಿಯ ಮನಶ್ಶಾಸ್ತ್ರಜ್ಞರ ಸಹಾಯ ಪಡೆದಿತ್ತು.

ಟ್ರಂಪ್ ಅವರಲ್ಲಿ ಕಂಡುಬರುವ ವಿಚಿತ್ರ ಮತ್ತು ಆಕ್ರಮಣಕಾರಿ ನಡವಳಿಕೆಯ ಮಾದರಿಗಳನ್ನು (psychopathic behavior pattern) ಸರಿಯಾಗಿ ನಿಭಾಯಿಸಲು ಮತ್ತು ಅವರಿಗೆ ತಕ್ಕಂತೆ ಸಂದೇಶಗಳನ್ನು ರೂಪಿಸಲು ಈ ತಜ್ಞರನ್ನು ಬಳಸಿಕೊಳ್ಳಲಾಗಿತ್ತು.

ಇಸ್ಲಾಮಾಬಾದ್ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಯ ಬಳಿಕ ಈ ಮನಶ್ಶಾಸ್ತ್ರಜ್ಞರ ಸಲಹೆಗಳನ್ನು ಇರಾನ್ ತನ್ನ ಸಂವಹನ ಮತ್ತು ಲಿಖಿತ ಸಂದೇಶಗಳಲ್ಲಿ ಅಳವಡಿಸಿಕೊಂಡಿತ್ತು. ಇದರ ನಂತರ ಟ್ರಂಪ್ ಅವರ ಪ್ರತಿಕ್ರಿಯೆಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು ಮತ್ತು ಮಾತುಕತೆ ಹೆಚ್ಚು ಸಕಾರಾತ್ಮಕವಾಗಿ ಮುನ್ನಡೆಯಿತು ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾದೇಶಿಕ ಮಧ್ಯಸ್ಥಗಾರರ ಮೂಲಕ ಟ್ರಂಪ್ ಅವರಿಗೆ ಸಂದೇಶಗಳನ್ನು ರವಾನಿಸಲಾಗುತ್ತಿತ್ತು. ಈ ತಂತ್ರಗಾರಿಕೆಯ ಫಲವಾಗಿ, ಇತ್ತೀಚೆಗೆ ಉಭಯ ದೇಶಗಳ ನಡುವೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಹಗೆತನವನ್ನು ಕೊನೆಗಾಣಿಸಲು ಪ್ರಾಥಮಿಕ ಒಪ್ಪಂದಕ್ಕೆ (MoU) ಬರಲಾಗಿದೆ. ಜೂನ್ 19 ರಂದು ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿ ಈ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಬೀಳುವ ಸಾಧ್ಯತೆಯಿದೆ.

ಮತ್ತೊಂದೆಡೆ, ಅಮೆರಿಕದಲ್ಲೂ ಟ್ರಂಪ್ ಅವರ ಆರೋಗ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಕುರಿತು ಚರ್ಚೆಗಳು ನಡೆಯುತ್ತಿವೆ. ಅವರ ಇತ್ತೀಚಿನ ವೈದ್ಯಕೀಯ ತಪಾಸಣೆಯಲ್ಲಿ ಬರೋಬ್ಬರಿ 22 ವೈದ್ಯಕೀಯ ತಜ್ಞರು ಭಾಗವಹಿಸಿದ್ದರು ಎಂದು ವರದಿಗಳು ತಿಳಿಸಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

Exit mobile version