ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ? ಜೂನ್ 30 ರಿಂದ ಮನೆ ಬಾಗಿಲಿಗೆ ಬರಲಿದ್ದಾರೆ ಅಧಿಕಾರಿಗಳು: ಏನೇನು ದಾಖಲೆಗಳು ಬೇಕು?
ಬೆಂಗಳೂರು: ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ರಾಜ್ಯಾದ್ಯಂತ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಸಾರ್ವಜನಿಕರಿಗೆ ಹಲವು ಉಪಯುಕ್ತ ಮಾಹಿತಿ ಇಲ್ಲಿವೆ.
ರಾಜ್ಯದಲ್ಲಿ ಯಾವುದೇ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಇದರ ಮುಖ್ಯ ಗುರಿಯಾಗಿದೆ. ಪ್ರಜಾಪ್ರಭುತ್ವದ ಭದ್ರ ಅಡಿಪಾಯವಾದ ಈ ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ಸಾರ್ವಜನಿಕರು ತಮ್ಮ ಹೆಸರನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ.
ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಪ್ರಮುಖ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪರಿಷ್ಕರಣೆಗೆ 2026ರ ಅಕ್ಟೋಬರ್ 1ನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (BLO) ಜೂನ್ 30 ರಿಂದ ಜುಲೈ 29 ರವರೆಗೆ ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಇದಾದ ನಂತರ ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಆಕ್ಷೇಪಣೆಗಳ ಕುರಿತು ನೋಟಿಸ್ ನೀಡುವುದು ಹಾಗೂ ಅವುಗಳ ವಿಲೇವಾರಿ ಪ್ರಕ್ರಿಯೆಯು ಆಗಸ್ಟ್ 5 ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿದ್ದು, ಅಂತಿಮವಾಗಿ ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಬೂತ್ ಮಟ್ಟದ ಅಧಿಕಾರಿಗಳು ಜೂನ್ 16 ರವರೆಗೆ ಮತದಾರರ ಪಟ್ಟಿಯಲ್ಲಿ ಇರುವ ಎಲ್ಲಾ ಮತದಾರರಿಗೆ ಎನ್ಯೂಮರೇಷನ್ ಫಾರಂಗಳನ್ನು ವಿತರಿಸಲಿದ್ದಾರೆ. ನಂತರ ಜೂನ್ 30 ರಿಂದ ಜುಲೈ 29 ರವರೆಗೆ ಮನೆಗಳಿಗೆ ಭೇಟಿ ನೀಡಿ, ಎನ್ಯೂಮರೇಷನ್ ಫಾರಂಗಳನ್ನು ದ್ವಿ ಪ್ರತಿಯಲ್ಲಿ ಒದಗಿಸಿ ಅದನ್ನು ಭರ್ತಿ ಮಾಡಲು ಸಾರ್ವಜನಿಕರಿಗೆ ಸಹಾಯ ಮಾಡಲಿದ್ದಾರೆ. ನಾಗರಿಕರು ಭರ್ತಿ ಮಾಡಿದ ಫಾರಂಗಳನ್ನು ಸಂಗ್ರಹಿಸಿ, ಅದಕ್ಕೆ ಸೂಕ್ತ ಸ್ವೀಕೃತಿಯನ್ನು ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಬಿಎಲ್‌ಓ ನೀಡುವ ಎರಡು ಫಾರಂಗಳನ್ನು ಭರ್ತಿ ಮಾಡಬೇಕಾಗಿ ಹಾಗೂ ಫಾರಂ ಮೇಲೆ ಇತ್ತೀಚಿನ ಒಂದು ಬಣ್ಣದ ಫೋಟೋವನ್ನು ಅಂಟಿಸಬೇಕಾಗಿ ವಿನಂತಿಸಲಾಗಿದೆ, ಆದರೆ ಫೋಟೋ ಅಂಟಿಸುವುದು ಕಡ್ಡಾಯವಲ್ಲ. ಫಾರಂ ಭರ್ತಿ ಮಾಡಲು ಅಥವಾ ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಲು ಅಗತ್ಯ ಸಹಾಯಕ್ಕಾಗಿ ಬೂತ್ ಮಟ್ಟದ ಅಧಿಕಾರಿಯನ್ನು ಸಂಪರ್ಕಿಸಿ ಭರ್ತಿ ಮಾಡಿದ ಫಾರಂಗಳನ್ನು ಅವರಿಗೆ ಹಿಂತಿರುಗಿಸಿ ಸ್ವೀಕೃತಿಯನ್ನು ಪಡೆಯಬಹುದಾಗಿದೆ.
ಭಾರತದ ಸಂವಿಧಾನದ 326ನೇ ವಿಧಿಯ ಪ್ರಕಾರ ಮತದಾರರಾಗಲು ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಅರ್ಜಿದಾರರು ಭಾರತ ದೇಶದ ನಾಗರಿಕರಾಗಿರಬೇಕು ಮತ್ತು 2026ರ ಅಕ್ಟೋಬರ್ 1ಕ್ಕೆ ಅನ್ವಯಿಸುವಂತೆ ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಇದರೊಂದಿಗೆ ಸಂಬಂಧಿತ ವಿಧಾನಸಭಾ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರಬೇಕು ಹಾಗೂ ಯಾವುದೇ ಕಾನೂನಿನ ಅಡಿಯಲ್ಲಿ ಅನರ್ಹರಾಗಿರಬಾರದು.
ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂಬುದನ್ನು ವಿವಿಧ ವಿಧಾನಗಳ ಮೂಲಕ ಖಚಿತಪಡಿಸಿಕೊಳ್ಳಬಹುದು. ಬೂತ್ ಮಟ್ಟದ ಅಧಿಕಾರಿಯ ಹತ್ತಿರವಿರುವ ಮತದಾರರ ಪಟ್ಟಿಯಿಂದ, ಇಸಿನೆಟ್ (ECINET) ಮೊಬೈಲ್ ಅಪ್ಲಿಕೇಷನ್ ಮೂಲಕ, ಅಧಿಕೃತ ವೆಬ್ ಸೈಟ್ voters.eci.gov.in ಮೂಲಕ ಅಥವಾ ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಸಂಬಂಧಿತ ಜಿಲ್ಲಾ ಚುನಾವಣಾಧಿಕಾರಿಗಳ ವೆಬ್ ಸೈಟ್ ಗಳ ಮುಖಾಂತರ ಪರಿಶೀಲಿಸಬಹುದು. ಒಂದು ವೇಳೆ ಹೆಸರು ಇಲ್ಲದಿದ್ದರೆ ನಮೂನೆ 6 ರನ್ನು ಭರ್ತಿ ಮಾಡಿ ಘೋಷಣಾ ಫಾರಂ ಜೊತೆಗೆ ಬಿಎಲ್ ಓಗೆ ಸಲ್ಲಿಸಬಹುದು ಅಥವಾ ಆನ್ ಲೈನ್ ಮೂಲಕ ಹಾಗೂ ಮೊಬೈಲ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಸಲ್ಲಿಸಲು ವಿವಿಧ ನಮೂನೆಗಳನ್ನು ನಿಗದಿಪಡಿಸಲಾಗಿದೆ. ಹೊಸ ಮತದಾರರ ನೋಂದಣಿಗಾಗಿ ನಮೂನೆ 6, ಅನಿವಾಸಿ ಮತದಾರರಾಗಿ ನೋಂದಾಯಿಸಲು ನಮೂನೆ 6ಎ, ಹೆಸರು ತೆಗೆದುಹಾಕಲು ಆಕ್ಷೇಪಣೆ ಸಲ್ಲಿಸಲು ನಮೂನೆ 7 ಹಾಗೂ ನಿವಾಸ ಸ್ಥಳ ಬದಲಾವಣೆ, ನಮೂದುಗಳ ತಿದ್ದುಪಡಿ, ಎಪಿಕ್ ಕಾರ್ಡ್ ಬದಲಾವಣೆ ಅಥವಾ ವಿಕಲಚೇತನ ಗುರುತು ದಾಖಲಿಸಲು ನಮೂನೆ 8 ರನ್ನು ಬಳಸಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಸರ್ಕಾರಿ ನೌಕರರ ಅಥವಾ ಪಿಂಚಣಿದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಎಸ್ ಎಸ್ ಎಲ್ ಸಿ ಪ್ರಮಾಣಪತ್ರ, ಖಾಯಂ ನಿವಾಸಿ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಅಥವಾ ಆಧಾರ್ ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು 2025ರ ಸೆಪ್ಟೆಂಬರ್ 9ರಂದು ಹೊರಡಿಸಿದ ಸೂಚನೆಗಳನ್ವಯ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಪ್ರಜಾ ಪ್ರಾತಿನಿಧ್ಯ ಕಾಯ್ದೆ 1950 ರ ಕಲಂ 24 ರ ಅನ್ವಯ ಚುನಾವಣಾ ನೋಂದಣಾಧಿಕಾರಿಗಳ (ERO) ಯಾವುದೇ ನಿರ್ಧಾರದ ವಿರುದ್ಧ ಜಿಲ್ಲಾ ದಂಡಾಧಿಕಾರಿ ಅಥವಾ ಜಿಲ್ಲಾ ಚುನಾವಣಾಧಿಕಾರಿಯವರ ಮುಂದೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1950 ಅನ್ನು ಸಂಪರ್ಕಿಸಬಹುದು ಅಥವಾ ವೆಬ್ ಸೈಟ್ www.ceo.karnataka.gov.in ಹಾಗೂ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ voters.eci.gov.in ಗೆ ಭೇಟಿ ನೀಡಬಹುದು. ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್, ಎಕ್ಸ್, ಇನ್ ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ceokarnataka ಖಾತೆಯ ಮೂಲಕವೂ ಮಾಹಿತಿ ಪಡೆಯಬಹುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























