ಅರೆಸ್ಟ್: ಉಗ್ರರಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಮೂವರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ

ಉಗ್ರರ ಜೊತೆಗೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವ ಆರೋಪದ ಮೇರೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದ ಮೂವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಶ್ರೀನಗರದ ನಿವಾಸಿಗಳಾದ ಮುಹಮ್ಮದ್ ಅಕಬರ್ ಭಟ್ ಮತ್ತು ಫಾತಿಮಾ ಶಾ ಮತ್ತು ಅನಂತನಾಗ್ ನಿವಾಸಿ ಸಬ್ಜಾರ್ ಅಹ್ಮದ್ ಶೇಖ್ ಬಂಧಿತ ಆರೋಪಿಗಳು. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪಿಗಳು ಪಾಕಿಸ್ತಾನದ ಹ್ಯಾಂಡ್ಲರ್‌ಗಳಾದ ಮಂಜೂರ್ ಅಹ್ಮದ್ ಷಾ ಮತ್ತು ಅಲ್ತಾಫ್ ಅಹ್ಮದ್ ಭಟ್‌ನೊಂದಿಗೆ ಸಂಬಂಧ ಹೊಂದಿದ್ದರು.
ಆರೋಪಿಗಳು ತಮ್ಮ ವೈಯಕ್ತಿಕ ಖಾತೆಗಳಲ್ಲಿ ಮತ್ತು ಚಾರಿಟಬಲ್ ಟ್ರಸ್ಟ್ ಆಗಿರುವ ಅಲ್-ಜಬರ್ ಟ್ರಸ್ಟ್‌ನ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಸ್ವೀಕರಿಸುತ್ತಿದ್ದರು. ಇದನ್ನು ಭಾರತದಲ್ಲಿ ಕಲ್ಲು ತೂರಾಟಗಾರರಿಗೆ ಹಣವನ್ನು ನೀಡುವುದು, ಜಮ್ಮು ಮತ್ತು ಕಾಶ್ಮೀರ ಮೂಲದ ಉಗ್ರರಿಗೆ ಹಣವನ್ನು ಒದಗಿಸುವುದು ಈ ರೀತಿಯ ಭಯೋತ್ಪಾದಕ ಚಟುವಟಿಕೆಗೆ ಬಳಸುತ್ತಿದ್ದರು ಎನ್ನಲಾಗಿದೆ.
ಈ ಮೂವರು ಆರೋಪಿಗಳು ಪಾಕಿಸ್ತಾನದ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಇತರ ಕೋರ್ಸ್‌ಗಳಿಗೆ ಪ್ರವೇಶದ ನೆಪದಲ್ಲಿ ಪಾಕಿಸ್ತಾನಿ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಇಡಿಯಿಂದ ತಿಳಿದುಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.