ಛೀ… ಥೂ… ಕೊಪ್ಪಳದಲ್ಲಿ ಅಸ್ಪೃಷ್ಯತೆ ಆಚರಣೆ: ಈ ಅನಾಗರಿಕರು ಬುದ್ಧಿ ಕಲಿಯೋದು ಯಾವಾಗ?

ಕೊಪ್ಪಳ: ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಅಸ್ಪೃಷ್ಯತೆ ಇನ್ನೂ ಜೀವಂತವಾಗಿದ್ದು, ಅಘೋಷಿತವಾಗಿ ಚಾಲ್ತಿಯಲ್ಲಿರುವ ಅಸ್ಪೃಷ್ಯತೆ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ.
ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ದಲಿತರಿಗೆ ಹೊಟೇಲ್ ಮತ್ತು ಕ್ಷೌರದ ಆಂಗಡಿಯಲ್ಲಿ ಪ್ರವೇಶಕ್ಕೆ ನಿರಾಕರಿಸುತ್ತಿರುವುದು ಕಂಡುಬಂದಿದೆ.
ದಲಿತರಿಗೆ ಪ್ರತ್ಯೇಕ ಪ್ಲೇಟ್, ತಟ್ಟೆ ಇಟ್ಟು ಅಸ್ಪಶ್ಯರಂತೆ ಕಾಣುವುದು ಗೊತ್ತಾಗಿದ್ದು, ಅವರು ಪ್ರಶ್ನಿಸಿದರೆ ಹೊಟೇಲ್ ಅಥವಾ ಅಂಗಡಿಯವರು ಉಪಾಹಾರ ಖಾಲಿ ಎಂಬ ನೆಪ ಹೇಳುತ್ತಿದ್ದಾರೆ.
ಕ್ಷೌರಿಕರು ದಲಿತರಿಗೆ ಕ್ಷೌರ ಮಾಡಲು ಕೂಡಾ ಹಿಂದೇಟು ಹಾಕುತ್ತಿದ್ದಾರೆ. ನಿಮಗೆ ಕ್ಷೌರ ಮಾಡಿದರೆ ನಮಗೆ ಬೇರೆಯವರು ಬೈಯ್ಯುತ್ತಾರೆ ಎಂದು ಕ್ಷೌರಿಕರು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗ್ರಾಮದ ಕೆಲವು ಅನಾಗರಿಕರು ಇನ್ನೂ ಜಾತಿ ಪದ್ಧತಿಯನ್ನು ಆಚರಿಸುತ್ತಿದ್ದು, ನಾಗರಿಕ ಸಮಾಜಕ್ಕೆ ದೇಶದ ಕಾನೂನಿಗೆ ಸವಾಲಾಗಿ ಪರಿಣಮಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಅಸ್ಪೃಷ್ಯತೆ ಇನ್ನೂ ಸಮಾಜದಲ್ಲಿ ಉಳಿಯಲು ಸಾಧ್ಯವಾಗಿದೆ. ಅಸ್ಪೃಷ್ಯತೆಯಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಸ್ಪೃಷ್ಯತಾ ಪದ್ಧತಿ ಆಚರಿಸುವ ಅನಾಗರಿಕರ ಮೇಲೆ ಔದಾರ್ಯ ತೋರುತ್ತಿರುವುದೇ ಇನ್ನೂ ಈ ಸಾಮಾಜಿಕ ಅನಿಷ್ಠ ಜೀವಂತವಾಗಿರಲು ಕಾರಣವಾಗಿದೆ.
ದೇಶದಲ್ಲೇ ಅಭಿವೃದ್ಧಿ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿರುವ ಕರ್ನಾಟಕದಲ್ಲಿ ಇನ್ನೂ ಕೂಡ ಅಸ್ಪೃಷ್ಯತೆ ಪದ್ಧತಿ ಜೀವಂತವಾಗಿರೋದು ನಾಚಿಕೆಗೇಡಿನ ಸಂಗತಿಯಾಗಿದೆ. ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಿದೆ. ನಾಗರಿಕ ಸಮಾಜದಲ್ಲಿ ಸಮಾನತೆಯಿಂದ ಬದುಕಲು ಸಾಧ್ಯವಿಲ್ಲದವರು ಅನಾಗರಿಕರು ಕತ್ತಲು ಕೋಣೆಯ ಜೈಲಿನಲ್ಲೇ ವಾಸಿಸಲು ಯೋಗ್ಯರಾಗಿದ್ದಾರೆ. ಅಸ್ಪೃಷ್ಯತೆ ಆಚರಿಸುವವರನ್ನು ರಕ್ಷಣೆ ಮಾಡುವವ ಅಧಿಕಾರಿಗಳನ್ನೂ ಜೈಲಿಗೆ ಕಳುಹಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.