ಅರುಣ್ ಜೇಟ್ಲಿ , ಸುಷ್ಮಾ ಸ್ವರಾಜ್ ಸಾವಿಗೆ ಪ್ರಧಾನಿ ಮೋದಿ ಕಾರಣ ಎಂದ ನಟ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಡದಿಂದ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಮೃತಪಟ್ಟರು ಎಂದು ಹೇಳಿಕೆ ನೀಡಿದ್ದ ಡಿಎಂಕೆ ಅಧ್ಯಕ್ಷ ಸ್ಟ್ಯಾಲಿನ್ ಅವರ ಪುತ್ರ, ನಟ ಉದಯ ನಿಧಿ ಸ್ಟಾಲಿನ್ ಇದೀಗ ತಮಿಳುನಾಡಿನಾದ್ಯಂತಹ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಡವನ್ನು ಸಹಿಸಿಕೊಳ್ಳಲಾಗದೆ ಹಿರಿಯ ಮುಖಂಡರಾದ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಮೃತಪಟ್ಟರು ಎಂದು ಉದಯನಿಧಿ ಗುರುವಾರ ಹೇಳಿಕೆ ನೀಡಿದ್ದರು.
ಉದಯ ನಿಧಿ ಹೇಳಿಕೆಗೆ ಸಂಬಂಧಿಸಿದಂತೆ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರ ಮಕ್ಕಳು ಉದಯನಿಧಿ ಸ್ಟಾಲಿನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉದಯನಿಧಿ ಸ್ಟಾಲಿನ್, ದಯವಿಟ್ಟು, ನಿಮ್ಮ ಚುನಾವಣಾ ಪ್ರಚಾರದಲ್ಲಿ ನನ್ನ ತಾಯಿಯ ನೆನಪನ್ನು ಬಳಸಬೇಡಿ. ನಿಮ್ಮ ಹೇಳಿಕೆ ತಪ್ಪು. ಪ್ರಧಾನಿ ಮೋದಿ ಯಾವಾಗಲೂ ನನ್ನ ತಾಯಿಗೆ ಗೌರವ ನೀಡುತ್ತಿದ್ದರು. ನಿಮ್ಮ ಹೇಳಿಕೆ ನೋವುಂಟು ಮಾಡಿದೆ” ಎಂದು ಬನ್ಸೂರಿ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ನೀವು ಚುನಾವಣಾ ಒತ್ತಡದಲ್ಲಿದ್ದೀರಿ ಎನ್ನುವುದು ನಮಗೆ ಗೊತ್ತು. ಆದರೆ ನಮ್ಮ ತಂದೆಯ ಬಗ್ಗೆ ಸುಳ್ಳು ಹೇಳಿದಾಗ ನಾವು ಮೌನವಾಗಿರುವುದಿಲ್ಲ. ಪ್ರಧಾನಿ ಮೋದಿ ಮತ್ತು ನಮ್ಮ ತಂದೆಯವರಿಗೆ ರಾಜಕೀಯ ಮೀರಿದ ಸಂಬಂಧಗಳು ಇದ್ದವು ಎಂದು ಸೋನಾಲಿ ಜೇಟ್ಲಿ ಬಕ್ಷಿ ಹೇಳಿದ್ದಾರೆ.
ಉದಯ ನಿಧಿಗೆ ದೊಡ್ಡದಾದ ಅಭಿಮಾನ ಬಳಗ ತಮಿಳುನಾಡಿನಲ್ಲಿದೆ. ಹೀಗಾಗಿ ಅವರ ವಿರುದ್ಧ ತಮಿಳುನಾಡಿನಲ್ಲಿ ಚುನಾವಣಾ ಆಯೋಗ ಕ್ರಮಕೈಗೊಳ್ಳಲು ಮುಂದಾದರೆ ಮತ್ತೆ ತಮಿಳುನಾಡಿನಲ್ಲಿ ರಾಜಕೀಯ ಸಂಘರ್ಷ ತೀವ್ರತೆ ಪಡೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

























