ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ!

ಶಿವಮೊಗ್ಗ: ಬಿಜೆಪಿಯ ಬಂಡಾಯ ಅಭ್ಯರ್ಥಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದು, ಇಂದು ಬೃಹತ್ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು.
ಪುತ್ರ ಕಾಂತೇಶ್ ಗೆ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಸಿಗದಿರುವ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಮುನಿಸಿಕೊಂಡಿರುವ ಈಶ್ವರಪ್ಪ ಶಿವಮೊಗ್ಗದಿಂದ ಕಣಕ್ಕಿಳಿದಿದ್ದಾರೆ.
ಈ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ನಾನು ನರೇಂದ್ರ ಮೋದಿಯವರಿಗೆ ಬೆಂಬಲ ನೀಡುತ್ತೇನೆ ಎಂದು ಕೆಎಸ್ ಈಶ್ವರಪ್ಪ ಅವರು ಈಗಾಗಲೆ ಹೇಳಿಕೊಂಡಿದ್ದಾರೆ. ದೇಶಕ್ಕಾಗಿ ಮೋದಿ, ಶಿವಮೊಗ್ಗಕ್ಕೆ ಈಶ್ವರಪ್ಪ ಎನ್ನುವ ಘೋಷಣೆಯನ್ನು ಈಶ್ವರಪ್ಪ ಬೆಂಬಲಿಗರು ಕೂಗಿದರು.
ಇನ್ನು ಪಕ್ಷದ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಕೆಎಸ್ ಈಶ್ವರಪ್ಪ ಅವರಿಗೆ ಬಿಜೆಪಿ ನೋಟಿಸ್ ನೀಡುವ ಸಾಧ್ಯತೆ ಇದೆ.
ನಾಮಪತ್ರ ಸಲ್ಲಿಕೆಯ ಬಳಿಕ ಮಾತನಾಡಿದ ಈಶ್ವರಪ್ಪ, ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಪ್ರತಿ ಮನೆ ಮನೆಗೆ ಹೋಗಿ ಈಶ್ವರಪ್ಪ ಏಕೆ ಚುನಾವಣೆಗೆ ನಿಂತಿದ್ದಾರೆ, ಏನು ಅನ್ಯಾಯ ಆಗಿದೆ ಅಂತ ನಮ್ಮ ಕಾರ್ಯಕರ್ತರು ತಿಳಿಸುತ್ತಾರೆ. ಅಪ್ಪ ಮಕ್ಕಳ ಕೈಯಲ್ಲಿ ಪಕ್ಷ ಏಕೆ ಇದೆ? ಚುನಾವಣೆ ಬಳಿಕ ನಂತರ ಬಿಜೆಪಿಯಲ್ಲಿ ಕೆಲವು ಬದಲಾವಣೆ ಆಗುತ್ತದೆ. ಪಕ್ಷ ಶುದ್ದೀಕರಣ ಆಗುವ ವಿಶ್ವಾಸ ಇದೆ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth