ಎಳನೀರು ಕುಡಿದು 137 ಜನರು ಅಸ್ವಸ್ಥ: ಮಂಗಳೂರಿನ ‘ಬೊಂಡ ಫ್ಯಾಕ್ಟರಿ’ಗೆ ಬೀಗ

ಮಂಗಳೂರು: ನಗರದ ಹೊರವಲಯದ ‘ಬೊಂಡ ಫ್ಯಾಕ್ಟರಿ’ಯಲ್ಲಿ ಎಳನೀರು ಕುಡಿದು ಹಲವರು ಅಸ್ವಸ್ಥರಾಗಿರುವ ಘಟನೆ ನಡೆದಿದ್ದು, 137 ಜನರು ಈವರೆಗೆ ಅಸ್ವಸ್ಥರಾಗಿರುವುದು ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆಯಲ್ಲಿ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಂ ಮಾರಾಟ ಸಂಸ್ಥೆ ಬೊಂಡ ಫ್ಯಾಕ್ಟರಿಯನ್ನು ಬಂದ್ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಆದೇಶಿಸಿದ್ದಾರೆ.
ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾ ಅಂಕಿತ ಅಧಿಕಾರಿ ಆಹಾರ ಸುರಕ್ಷತೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಅವರನ್ನು ಒಳಗೊಂಡ ತಂಡ ಗುರುವಾರ ಅಡ್ಯಾರ್‌ನ ಬೊಂಡ ಫ್ಯಾಕ್ಟರಿಗೆ ಭೇಟಿ ನೀಡಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ಮತ್ತು ಮತ್ತು ಮುಂದಿನ ಆದೇಶದವರೆಗೆ ಬೊಂಡ ನೀರು ಮತ್ತು ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ನೋಟೀಸ್ ನೀಡಿ ಬಂದ್ ಮಾಡಲಾಗಿದೆ.
ಬೊಂಡ ಫ್ಯಾಕ್ಟರಿಯ ಎಳನೀರು ಕುಡಿದು ಇದುವರೆಗೆ 137 ಮಂದಿ ಅಸ್ವಸ್ಥರಾಗಿರುವುದು ಬೆಳಕಿಗೆ ಬಂದಿದ್ದು, ಹೊರರೋಗಿಗಳಾಗಿ 84 ಮಂದಿ ಒಳರೋಗಿಗಳಾಗಿ 53 ಮಂದಿಗೆ ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಮಂಗಳೂರು, ಬಂಟ್ವಾಳದ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ 30 ಮಂದಿಗೆ ಚಿಕಿತ್ಸೆ ಮುಂದುವರೆದಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಡಾ.ತಿಮ್ಮಯ್ಯ ತಿಳಿಸಿದ್ದಾರೆ.
ಇನ್ನೂ 15 ಲೀಟರ್ ಎಳನೀರು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಇತ್ತೀಚೆಗೆ ಮಂಗಳೂರು ಭಾಗದಲ್ಲಿ ಬೊಂಡ ಫ್ಯಾಕ್ಟರಿ ಸಾಕಷ್ಟು ಜನಪ್ರಿಯವಾಗಿತ್ತು. ಇಲ್ಲಿ ಬೊಂಡ(ಎಳನೀರು) ಖರೀದಿಗೆ ಸಾಕಷ್ಟು ಜನರು ಮುಗಿಬೀಳುತ್ತಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth