ಖಾಕಿಗೆ ಕಳಂಕ: ಬೆಂಗಳೂರಲ್ಲಿ ಪೊಲೀಸ್ ಐಡಿ ಕಾರ್ಡ್ ತೋರಿಸಿ 20 ಲಕ್ಷ ರೂ. ದರೋಡೆ; ಸಿಐಡಿ ಇನ್ಸ್’ಪೆಕ್ಟರ್ ಪರಾರಿ!
ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ, ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ ಐಡಿ ಕಾರ್ಡ್ ತೋರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ದರೋಡೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ದರೋಡೆ ಪ್ರಕರಣದಲ್ಲಿ ಸಿಐಡಿ ಇನ್ಸ್ಪೆಕ್ಟರ್ ಒಬ್ಬರ ಕೈವಾಡವಿರುವ ಗಂಭೀರ ಆರೋಪ ಕೇಳಿಬಂದಿದ್ದು, ಸದ್ಯ ಅವರು ತಲೆಮರೆಸಿಕೊಂಡಿದ್ದಾರೆ.
ಕೇರಳ ಮೂಲದ ಕೆಲ ಯುವಕರು ಮನಿ ಟ್ರೇಡಿಂಗ್ (ಹಣದ ವಹಿವಾಟು) ಮಾಡುವುದಕ್ಕಾಗಿ ಬೆಂಗಳೂರಿನ ಮಡಿವಾಳದ ಖಾಸಗಿ ಹೋಟೆಲ್ ವೊಂದಕ್ಕೆ ಹಣ ತಂದಿದ್ದರು. ಈ ವೇಳೆ ಸಿಐಡಿ ಪೊಲೀಸ್ ಜೀಪ್ ನಲ್ಲಿ ಬಂದ ಖಾಸಗಿ ವ್ಯಕ್ತಿಗಳು, ತಾವು ಪೊಲೀಸರು ಎಂದು ಐಡಿ ಕಾರ್ಡ್ ತೋರಿಸಿ ಬೆದರಿಕೆ ಹಾಕಿದ್ದಾರೆ. “ನೀವು ಅಕ್ರಮವಾಗಿ ಹಣ ತಂದಿದ್ದೀರಾ” ಎಂದು ಧಮ್ಕಿ ಹಾಕಿ, ಯುವಕರಿಂದ 20 ಲಕ್ಷ ರೂಪಾಯಿಯನ್ನು ದೋಚಿ ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡ ಕೇರಳದ ಯುವಕರು ತಕ್ಷಣವೇ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದೃಷ್ಟವಶಾತ್, ಹಣ ಕೊಡುವ ಸಂದರ್ಭದಲ್ಲಿ ಯುವಕರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು.
ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಡಿಸಿಪಿ ಮೊಹಮ್ಮದ್ ಸಜೀತ, ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಖಾಸಗಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ, “ಕೃತ್ಯ ನಡೆದಾಗ ಸಿಐಡಿ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಅವರೂ ಸಹ ಜೀಪ್ ನಲ್ಲಿದ್ದರು. ನಾವು ಮಾತ್ರ ಹೋಟೆಲ್ ಗೆ ಹೋಗಿ ಹಣ ಪಡೆದುಕೊಂಡು ಬಂದೆವು” ಎಂದು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ.
ಪ್ರಕರಣ ದಾಖಲಾಗುತ್ತಿದ್ದಂತೆ ಇನ್ಸ್ ಪೆಕ್ಟರ್ ಮಹೇಶ್ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಸದ್ಯ ಕೃತ್ಯಕ್ಕೆ ಬಳಸಲಾಗಿದ್ದ ಅಸಲಿ ಸಿಐಡಿ ಪೊಲೀಸ್ ಜೀಪ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಇನ್ಸ್ ಪೆಕ್ಟರ್ ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್, “ಹೋಟೆಲ್ನಲ್ಲಿ ಇಬ್ಬರು ವ್ಯಕ್ತಿಗಳ ಬಳಿ ಇದ್ದ ಹಣವನ್ನು ಪೊಲೀಸರೆಂದು ಹೇಳಿ ದೋಚಿರುವ ಬಗ್ಗೆ ಮಡಿವಾಳ ಠಾಣೆಗೆ ದೂರು ಬಂದಿದೆ. ಪ್ರಕರಣದಲ್ಲಿ ಇನ್ಸ್ ಪೆಕ್ಟರ್ ಒಬ್ಬರ ಪಾತ್ರವಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ತನಿಖೆ ಪ್ರಗತಿಯಲ್ಲಿದೆ. ಈಗಾಗಲೇ ದರೋಡೆಯಾಗಿದ್ದ ಹಣವನ್ನು ರಿಕವರಿ ಮಾಡಲಾಗಿದೆ. ಕೃತ್ಯಕ್ಕೆ ಬಳಕೆಯಾದ ಜೀಪ್ ವಶಪಡಿಸಿಕೊಂಡಿದ್ದು, ದೂರುದಾರರ ಹಿನ್ನೆಲೆಯನ್ನೂ ಪರಿಶೀಲಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಸದ್ಯ ಮಡಿವಾಳ ಎಸಿಪಿ ನೇತೃತ್ವದಲ್ಲಿ ಈ ಹೈಪ್ರೊಫೈಲ್ ದರೋಡೆ ಪ್ರಕರಣದ ತನಿಖೆ ಚುರುಕಾಗಿ ಸಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























