ಖ್ಯಾತ ಕವಿ ಜಯಂತ ಮಹಾಪಾತ್ರ ನಿಧನ: ಒಡಿಶಾ ಸಿಎಂ ಸಂತಾಪ; “ಅಸಹಿಷ್ಣುತೆ” ವಿರುದ್ಧ ಪ್ರತಿಭಟಿಸಿ ‘ಪದ್ಮಶ್ರೀ’ಯನ್ನೇ ವಾಪಾಸ್ ನೀಡಿದ್ದ ಕವಿ

ಖ್ಯಾತ ಕವಿ ಜಯಂತ ಮಹಾಪಾತ್ರ ಅವರು ಒಡಿಶಾದ ಕಟಕ್ ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ನ್ಯುಮೋನಿಯಾ ಮತ್ತು ಇತರ ವೃದ್ಧಾಪ್ಯ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗಾಗಿ ಎಸ್ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಮಹಾಪಾತ್ರ ಭಾನುವಾರ ರಾತ್ರಿ ಕೊನೆಯುಸಿರೆಳೆದರು.
ಅಕ್ಟೋಬರ್ 22, 1928 ರಂದು ಕಟಕ್‌ನಲ್ಲಿ ಜನಿಸಿದ ಮಹಾಪಾತ್ರ ಅವರು ಇಂಗ್ಲಿಷ್ ಕಾವ್ಯಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಕವಿ. 2009ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು. ಆದರೆ ಅವರು “ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ” ವಿರುದ್ಧ ಪ್ರತಿಭಟಿಸಲು ಅವರು 2015 ರಲ್ಲಿ ಅದನ್ನು ವಾಪಸ್ ನೀಡಿದ್ದರು.
ಆಧುನಿಕ ಭಾರತೀಯ ಇಂಗ್ಲಿಷ್ ಸಾಹಿತ್ಯದಲ್ಲಿ ಕ್ಲಾಸಿಕ್ ಎಂದು ಪರಿಗಣಿಸಲಾದ ‘ಇಂಡಿಯನ್ ಸಮ್ಮರ್’ ಮತ್ತು ‘ಹಂಗರ್’ ಲೇಖಕರಾದ ಮಹಾಪಾತ್ರ ಅವರು 27 ಕವನ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಏಳು ಒಡಿಯಾ ಭಾಷೆಯಲ್ಲಿ ಮತ್ತು ಉಳಿದವು ಇಂಗ್ಲಿಷ್ ನಲ್ಲಿವೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮಹಾಪಾತ್ರ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದು, ಅವರು ಇಂಗ್ಲಿಷ್ ಮತ್ತು ಒಡಿಯಾ ಸಾಹಿತ್ಯದಲ್ಲಿ ಮೇಧಾವಿ ಎಂದು ಬಣ್ಣಿಸಿದ್ದಾರೆ.
‘ಅವರು ಒಡಿಯಾ ಸಾಹಿತ್ಯದ ವ್ಯಾಪ್ತಿಯನ್ನು ಎತ್ತರಕ್ಕೆ ಯಶಸ್ವಿಯಾಗಿ ಏರಿಸಿದ್ದರು. ಅವರ ಬುದ್ಧಿಶಕ್ತಿ ಮತ್ತು ಜ್ಞಾನವು ಅನೇಕ ಯುವಕರಿಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಬರೆಯಲು ಮಾರ್ಗದರ್ಶಿ ಮನೋಭಾವವಾಗಿತ್ತು’ ಎಂದಿದ್ದಾರೆ.
ಮಹಾಪಾತ್ರ ಅವರ ಅಂತ್ಯಕ್ರಿಯೆ ಸೋಮವಾರ ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿಎಂ ಸಂತಾಪ ಸೂಚಿಸಿದ್ದಾರೆ.