5:32 PM Wednesday 21 - January 2026

ಯುವಕನನ್ನು ಹೊತ್ತೊಯ್ದ ಚಿರತೆ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ವೇಳೆ ದುರಂತ!

malemadeshwara betta
21/01/2026

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಬುಧವಾರ (ಜನವರಿ 21) ಮುಂಜಾನೆ ಘೋರ ದುರಂತವೊಂದು ಸಂಭವಿಸಿದೆ. ಮಾದಪ್ಪನ ದರ್ಶನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತರೊಬ್ಬರು ಚಿರತೆ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆಯ ವಿವರ:

ಮೃತ ದುರ್ದೈವಿಯನ್ನು ಮಂಡ್ಯ ಜಿಲ್ಲೆಯ ಚಿರನಹಳ್ಳಿ ಗ್ರಾಮದ ಪ್ರವೀಣ್ (30) ಎಂದು ಗುರುತಿಸಲಾಗಿದೆ. ಮಂಡ್ಯದ ಚಿರನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಮಂಗಳವಾರ ರಾತ್ರಿ ಬೆಟ್ಟದ ತಪ್ಪಲಾದ ತಾಳುಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ದ ಭಕ್ತರ ತಂಡ, ಬುಧವಾರ ಮುಂಜಾನೆ ಪಾದಯಾತ್ರೆ ಮುಂದುವರಿಸಿತ್ತು.

ಏಕಾಏಕಿ ನಡೆದ ದಾಳಿ:

ಬೆಳಗ್ಗೆ ಪಾದಯಾತ್ರಿಕರ ಮಾರ್ಗದಲ್ಲಿ ಸಾಗುತ್ತಿದ್ದಾಗ, ರಂಗಸ್ವಾಮಿ ಒಡ್ಡಿನ ಸಮೀಪ ಹೊಂಚು ಹಾಕಿ ಕುಳಿತಿದ್ದ ಚಿರತೆಯು ಏಕಾಏಕಿ ಪ್ರವೀಣ್ ಮೇಲೆ ದಾಳಿ ಮಾಡಿದೆ. ಪ್ರವೀಣ್ ಜೊತೆಯಲ್ಲಿದ್ದ ಸುಮಾರು ಐವರು ಸ್ನೇಹಿತರು ಚಿರತೆಯನ್ನು ಓಡಿಸಲು ಕಿರುಚಾಡಿ ಯತ್ನಿಸಿದರೂ, ಅಷ್ಟರಲ್ಲೇ ಚಿರತೆಯು ಪ್ರವೀಣ್‌ನನ್ನು ದಟ್ಟ ಅರಣ್ಯದೊಳಗೆ ಎಳೆದೊಯ್ದಿದೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು:

ಭಯಭೀತರಾದ ಸ್ನೇಹಿತರು ತಕ್ಷಣವೇ ಮಲೆ ಮಹದೇಶ್ವರ ಬೆಟ್ಟದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದಾಗ, ಸುಮಾರು 11 ಗಂಟೆಯ ವೇಳೆಗೆ ಪ್ರವೀಣ್ ಅವರ ಮೃತದೇಹ ಪತ್ತೆಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version