ಜನರಲ್ಲಿ ಭೀತಿ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ: ಕೋಳಿ ಫಾರ್ಮ್ ನಲ್ಲಿಟ್ಟಿದ್ದ ಬೋನಿಗೆ ಬಿದ್ದ ಚಿರತೆ

03/02/2024
ಮೈಸೂರು: ತಾಲೂಕಿನ ಜಯಪುರ ಹೋಬಳಿಯ ದಾರಿಪುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಲವು ಹಳ್ಳಿಗಳ ಜನರಲ್ಲಿ ಭೀತಿ ಸೃಷ್ಟಿಸಿದ್ದ ಚಿರತೆ ಇದೀಗ ಬೋನಿಗೆ ಬಿದ್ದಿದ್ದು, ಸಾರ್ವಜನಿಕರು ಮತ್ತು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಭಾಗದಲ್ಲಿ ಚಿರತೆ ಹಲವು ದಿನಗಳಿಂದ ಓಡಾಡುತ್ತಾ, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಾ, ಆತಂಕ ಸೃಷ್ಟಿ ಮಾಡಿತ್ತು. ಹೀಗಾಗಿ ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.
ಅಂತೆಯೇ ದಾರಿಪುರ ಗ್ರಾಮದ ಕೋಳಿ ಫಾರ್ಮ್ ನಲ್ಲಿ ಅರಣ್ಯ ಇಲಾಖೆ ಬೋನು ಇಟ್ಟಿದ್ದರು. ಕೊನೆಗೂ ಬೋನಿಗೆ 2 ವರ್ಷದ ಹೆಣ್ಣು ಚಿರತೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಚಿರತೆ ಬೋನಿಗೆ ಬಿದ್ದಿರುವ ವಿಚಾರ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಸೆರೆ ಸಿಕ್ಕಿರುವ ಚಿರತೆಯನ್ನು ಅರಣ್ಯಕ್ಕೆ ಬಿಡಲು ನಿರ್ಧರಿಸಿದ್ದಾರೆ.