ಲೋಕಸಭಾ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕಾಟ ನಡೆಸಲಾಗುತ್ತಿದೆ: ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಬಹುದಾಗಿರುವ ಅಭ್ಯರ್ಥಿಗಳನ್ನು ಹುಡುಕಾಟ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ವೀಕ್ಷಕರಿಗೆ ಸೂಚನೆ ನೀಡಿದ್ದಾರೆ. ದುರ್ಬಲ ಅಭ್ಯರ್ಥಿಗಳು ಇರುವ ಕ್ಷೇತ್ರಗಳಿಗೆ ಇತರೆ ಪಕ್ಷಗಳಿಂದ ನಾಯಕರನ್ನು ಕರೆತಂದು ಆದರೂ ಗೆಲುವ ಸಾಧಿಸುವ ಉದ್ದೇಶವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಸಚಿವರು ಮತ್ತು ಸಚಿವರ ನೇತೃತ್ವದ ಜಿಲ್ಲಾ ವೀಕ್ಷಕರ ತಂಡಗಳು ತಮ್ಮ ತಮ್ಮ ಜಿಲ್ಲೆಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸಲಿದ್ದಾರೆ. ಹೈಕಮಾಂಡ್ ಈ ಅಭ್ಯರ್ಥಿಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಫೆ.10ರಂದು ಪಟ್ಟಿ ಕುರಿತು ಚರ್ಚೆ ನಡೆಸಲು ಸಭೆ ಕರೆಯುವ ಸಾಧ್ಯತೆಗಳಿವೆ. ಈ ಸಭೆಯಲ್ಲಿ ಮೊದಲ ಪಟ್ಟಿ ಘೋಷಣೆ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಬೆಳಗಾವಿ ಜಿಲ್ಲೆಯ ಎರಡೂ ಸ್ಥಾನಗಳಲ್ಲಿ ಹಲವು ಆಕಾಂಕ್ಷಿಗಳಿದ್ದು, ಪ್ರತಿ ಸ್ಥಾನಕ್ಕೆ ಕನಿಷ್ಠ 2-3 ಅಭ್ಯರ್ಥಿಗಳ ಹೆಸರನ್ನು ಸೂಚಿಸಲಾಗಿದೆ. ‘ಬೆಳಗಾವಿಯ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಕೇಂದ್ರ ನಾಯಕರು ತೆಗೆದುಕೊಳ್ಳುತ್ತಾರೆಂದು ಹೇಳಿದರು.