ಗುಟ್ಕಾ ಉಗಿಯಲು ಬಗ್ಗಿದಾಗ ಡಿಕ್ಕಿ ಹೊಡೆದ ರೈಲು: ವ್ಯಕ್ತಿಯ ದಾರುಣ ಸಾವು
ಪಾಟ್ನಾ: ರೈಲ್ವೆ ಪ್ಲಾಟ್ಫಾರ್ಮ್ ಅಂಚಿನಲ್ಲಿ ನಿಂತು ಗುಟ್ಕಾ ಉಗಿಯಲು ಪ್ರಯತ್ನಿಸಿದ ವ್ಯಕ್ತಿಯೊಬ್ಬರು ವೇಗವಾಗಿ ಬಂದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಪಾಟ್ನಾದ ಪೂರ್ವ ಮಧ್ಯ ರೈಲ್ವೆಯ ದಾನಾಪುರ ವಿಭಾಗದ ‘ಬರ್ಹ್’ (Barh) ರೈಲ್ವೆ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಂಗಳವಾರ ಬೆಳಿಗ್ಗೆ ಸುಮಾರು 9 ಗಂಟೆಯ ವೇಳೆಗೆ, ಅಪರಿಚಿತ ವ್ಯಕ್ತಿಯೊಬ್ಬರು ತಂಬಾಕು ಅಗಿಯುತ್ತಾ ಪ್ಲಾಟ್ ಫಾರ್ಮ್ ಸಂಖ್ಯೆ 2ರ ತುದಿಗೆ ಬಂದಿದ್ದಾರೆ. ಅದೇ ಸಮಯದಲ್ಲಿ ಪಾಟ್ನಾ–ಹೌರಾ ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ನಿಲ್ದಾಣಕ್ಕೆ ವೇಗವಾಗಿ ಬಂದಿದೆ. ರೈಲು ಬರುವುದನ್ನು ಗಮನಿಸದ ವ್ಯಕ್ತಿಗೆ ರೈಲು ಜೋರಾಗಿ ಡಿಕ್ಕಿ ಹೊಡೆದಿದೆ.
ಘಟನೆಯಿಂದ ವ್ಯಕ್ತಿಯ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಕೂಡಲೇ ರೈಲ್ವೆ ರಕ್ಷಣಾ ಪಡೆ (RPF) ಮತ್ತು ಅಧಿಕಾರಿಗಳು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತರ ಗುರುತು ಇನ್ನು ಪತ್ತೆಯಾಗಿಲ್ಲ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜಿಆರ್ಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರೈಲುಗಳು ನಿಲ್ದಾಣಕ್ಕೆ ಆಗಮಿಸುವಾಗ ಅಥವಾ ಹಾದು ಹೋಗುವಾಗ ಪ್ರಯಾಣಿಕರು ಪ್ಲಾಟ್ಫಾರ್ಮ್ನ ಹಳದಿ ಗೆರೆಯಿಂದ ದೂರವಿರಬೇಕು ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ರೈಲ್ವೆ ಇಲಾಖೆ ಮನವಿ ಮಾಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























