ಲೈವ್ ನಲ್ಲಿಯೇ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ: ವಿಡಿಯೋ ವೈರಲ್

jaipur
04/07/2023

ಜೈಪುರ: ವಿದೇಶಿ ಜೀವನಗಳ ಕುರಿತು ಯೂಟ್ಯೂಬ್ ಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡುವವರ ಸಂಖ್ಯೆ ಇದೀಗ ಹೆಚ್ಚಳವಾಗಿದೆ. ಭಾರತದಿಂದಲೂ ಸಾಕಷ್ಟು ಜನರು ವಿದೇಶ ಪ್ರವಾಸ ಮಾಡಿ, ಅಲ್ಲಿನ ನಗರಗಳ, ಜನರ ಬಗ್ಗೆ ಸಾಕಷ್ಟು ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದಾರೆ. ಹಾಗೆಯೇ ವಿದೇಶದಿಂದ ಭಾರತಕ್ಕೆ ಬರುವ ಪ್ರವಾಸಿಗಳು ಕೂಡ ಭಾರತದ ವಿಡಿಯೋಗಳನ್ನು ಮಾಡಿ,  ಇಲ್ಲಿನ ಜನರ ಜೀವನವನ್ನು ಅವರ ದೇಶದ ಪ್ರಜೆಗಳಿಗೆ ತಿಳಿಯಪಡಿಸುತ್ತಾರೆ. ಆದರೆ ಇತ್ತೀಚೆಗೆ ಭಾರತಕ್ಕೆ ಆಗಮಿಸುತ್ತಿರುವ ವಿದೇಶಿ ಪ್ರಜೆಗಳಿಗೆ ಕಿರುಕುಳ ನೀಡುತ್ತಿರುವ ಘಟನೆಗಳು ನಡೆಯುತ್ತಿರುವುದು ವಿಷಾದದ ಸಂಗತಿಯಾಗಿದೆ.

ಬೆಂಗಳೂರಿನ ಶಿವಾಜಿ ನಗರದಲ್ಲಿ ಇತ್ತೀಚೆಗಷ್ಟೆ ವ್ಯಕ್ತಿಯೋರ್ವ ವಿದೇಶಿ ಪ್ರವಾಸಿಯ ಮೊಬೈಲ್ ಕಸಿದು, ವಿಡಿಯೋ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿತ್ತು. ಆ ವಿದೇಶಿ ಪ್ರವಾಸಿಯು ಈ ಘಟನೆಯಿಂದ ತೀವ್ರವಾಗಿ ನೊಂದುಕೊಂಡಿದ್ದ. ಭಾರತೀಯರು ಅಂದ್ರೆ ಸೌಮ್ಯ ಸ್ವಭಾವದವರು ಎಂದೇ ವಿದೇಶಿಯರು ಇಲ್ಲಿಗೆ ಅತ್ಯಂತ ಧೈರ್ಯದಿಂದ ಆಗಮಿಸುತ್ತಾರೆ ಆದ್ರೆ, ಇಲ್ಲಿ ಇಂತಹ ಅನುಭವವಾದಾಗ ಅವರು ತೀವ್ರವಾಗಿ ನೋವು ಕೂಡ ವ್ಯಕ್ತಪಡಿಸ್ತಾರೆ, ಇದು ನಿಜವಾದ ಭಾರತವಲ್ಲ ಎಂದು ಆ ವ್ಯಕ್ತಿ ಪದೇ ಪದೇ ತೀವ್ರ ಬೇಸರ ವ್ಯಕ್ತಪಡಿಸಿರುವುದನ್ನು ಆ ವಿಡಿಯೋದಲ್ಲಿ ಕಾಣಬಹುದಾಗಿದೆ. ಇದೀಗ ಅಂತಹದ್ದೇ ಘಟನೆಯೊಂದು ಜೈಪುರದಲ್ಲಿ ಕೂಡ ನಡೆದಿದ್ದು, ಭಾರತೀಯರು ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದಲ್ಲಿ ವಿದೇಶಿ ಪ್ರವಾಸಿ ಮಹಿಳೆಯನ್ನು ವ್ಯಕ್ತಿಯೋರ್ವ ಉದ್ದೇಶಪೂರ್ವಕವಾಗಿ ಅನುಚಿತವಾಗಿ ಸ್ಪರ್ಶಿಸಿದ ಘಟನೆ ನಡೆದಿದೆ. ಮಹಿಳೆ ಲೈವ್ ನಲ್ಲಿ ಇರುವ ಸಂದರ್ಭದಲ್ಲಿ ಈ ವ್ಯಕ್ತಿ ನೀಚ ಕೆಲಸ ಮಾಡಿದ್ದಾನೆ. ರಾಜಸ್ಥಾನದ ಜೈಪುರ ನಗರದ ಸಿಂಧಿ ಕ್ಯಾಂಪ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಈ ವಿಡಿಯೋ ಯಾವಾಗ ನಡೆದಿರುವುದು ಎನ್ನುವುದು ತಿಳಿದಿಲ್ಲ ಆದ್ರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ. ಮಹಿಳಾ ಪ್ರವಾಸಿ ಹಾಗೂ ಆಕೆಯ ಸಂಗಾತಿ ಜೊತೆಗೆ ವಿಡಿಯೋ ಮಾಡಿಕೊಂಡು ತೆರಳುತ್ತಿದ್ದ ವೇಳೆ, ಅಲ್ಲೊಬ್ಬ ಸ್ಥಳೀಯ ವ್ಯಕ್ತಿ, ಇವರಿಗೆ ಸಹಾಯ ಮಾಡುವ ನೆಪದಲ್ಲಿ ಪದೇ ಪದೇ ಮಹಿಳೆಯ ಮೈಮುಟ್ಟುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಮಹಿಳೆಯ ಭುಜಕ್ಕೆ ಕೈ ಹಾಕಿದ ಆ ವ್ಯಕ್ತಿ ಎದೆಯನ್ನು ಸ್ಪರ್ಶಿಸಿದ್ದು, ತೋಳನ್ನು ಬಲವಾಗಿ ವ್ಯಕ್ತಿ ಹಿಡಿದಾಗ ವಿದೇಶಿ ಮಹಿಳೆ ಆತ ಕೈಯಿಂದ ಬಿಡಿಸಿಕೊಂಡ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಸದ್ಯ ವಿಡಿಯೋದಲ್ಲಿ ಕಂಡು ಬಂದ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

ಇನ್ನೂ ಈ ಘಟನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳಿಂದ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version