12:19 PM Tuesday 21 - October 2025

ಕೈಗೆ ಸಿಕ್ಕಿದ 10 ಲಕ್ಷ ಹಣ ಬಾಯಿಗೆ ಸಿಗಲಿಲ್ಲ: ಕಂತೆ ಕಂತೆ ಹಣ ಕಂಡಿದ್ದೇ ತಡ ಬಾರ್ ಗೆ ನುಗ್ಗಿದ..!

mangalore
06/12/2022

ಮಂಗಳೂರು: ನಗರದ ರಸ್ತೆ ಬದಿಯಲ್ಲಿ ಸುಮಾರು ಹತ್ತು ಲಕ್ಷ ಮೌಲ್ಯದ ಹಣವಿದ್ದ ಬಂಡಲ್ ಬಿದ್ದಿತ್ತು.‌ ಆ ಕಟ್ಟನ್ನು ಕಂಡ ಆ ಕುಡುಕನಿಗೆ ಸ್ವರ್ಗವೇ ಧರೆಗಿಳಿದು ಬಂದಂತಾಗಿತ್ತು. ಆದ್ರೆ ಕೊನೆಗೆ ಆಗಿದ್ದು ಮಾತ್ರ ಬೇರೆ.

ದಾರಿ ಬದಿಯಲ್ಲಿ ಕುಡುಕನಿಗೆ ಬಿದ್ದು ಸಿಕ್ಕಿದ 10 ಲಕ್ಷ ರೂಪಾಯಿಯ ಗಂಟೊಂದು ಅರ್ಧಗಂಟೆಯಲ್ಲೇ ಪೊಲೀಸರ ಪಾಲಾದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. ಆತನ ಮದ್ಯಚಟದಿಂದಲೇ ಭಾರೀ ಮೊತ್ತದ ಈ ಗಂಟು ಪೊಲೀಸರ ಪಾಲಾಗಿದೆ. ಇದೀಗ ವಾರ ಕಳೆದರೂ ಹಣ ವಾರಸುದಾರರಿಲ್ಲದೇ ಪೊಲೀಸ್ ಠಾಣೆಯಲ್ಲಿಯೇ ಬಾಕಿಯಾಗಿದೆ.

ಅಂದು ನವೆಂಬರ್ 27, ಮಂಗಳೂರು ನಗರದ ಪಂಪ್ ವೆಲ್ ಬಳಿ ಶಿವರಾಜ್ ಎಂಬಾತ ಅಲ್ಲಿಯೇ ಸಮೀಪದ ವೈನ್ ಶಾಪ್‌ನಲ್ಲಿ ಮದ್ಯ ಸೇವಿಸಿ ಹೊರಗಡೆ ಬೀಡಿ ಸೇದುತ್ತಾ ನಿಂತಿದ್ದರು. ಆಗ ಹೊರಗಡೆ ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಚೀಲವೊಂದು ಅನಾಥವಾಗಿ ಬಿದ್ದಿತ್ತು. ಇದನ್ನು ಶಿವರಾಜ್ ಹಾಗೂ ಮತ್ತೋರ್ವ ಕೂಲಿ ಕಾರ್ಮಿಕ ಕಂಡಿದ್ದಾರೆ. ತಕ್ಷಣ ಶಿವರಾಜ್ ಚೀಲವನ್ನು ಎತ್ತಿ ನೋಡಿದಾಗ 500, 2,000 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳು ಕಂಡು ಬಂದಿದೆ. ಇಬ್ಬರೂ ಒಂದು ಕ್ಷಣಕ್ಕೆ ನೋಟುಗಳ ಬಂಡಲ್ ನೋಡಿ ಶಾಕ್ ಆಗಿದ್ದಾರೆ.

ಬೇರೆ ಯಾರೇ ಆಗಿದ್ದರೂ, ಕೈಗೆ ಸಿಕ್ಕಿದ ಹಣ ಹಿಡಿದುಕೊಂಡು ನೇರವಾಗಿ ಮನೆಯ ದಾರಿ ಹಿಡಿಯುತ್ತಿದ್ದರು. ಆದರೆ, ಇವರು  ನೋಟುಗಳ ಕಂತೆ ಕಂಡಿದ್ದೇ ಮತ್ತೆ ಮದ್ಯ ಕುಡಿಯುವ ಸೆಳೆತಕ್ಕೊಳಗಾಗಿದ್ದಾರೆ. ಬಂಡಲ್‌ ನಿಂದ ಎರಡು ನೋಟು ಎಳೆದು ಮತ್ತೆ ವೈನ್ ಶಾಪ್‌ ನೊಳಗೆ ಕಾಲಿಟ್ಟಿದ್ದಾರೆ. ಬಳಿಕ ಹೊರ ಬಂದ ಇಬ್ಬರೂ ಅನತಿ ದೂರ ಸಾಗಿದ್ದಾರೆ. ಆಗ ಕೂಲಿ ಕಾರ್ಮಿಕ ತನಗೇನು ಇಲ್ಲವೇ ಎಂದಾಗ 2000, 500 ರೂ. ಮುಖಬೆಲೆಯ ಬಂಡಲ್ ಒಂದನ್ನು ಶಿವರಾಜ್ ಆತನ ಕೈಗೆ ನೀಡಿದ್ದಾನೆ. ಉಳಿದ ನೋಟುಗಳ ಕಂತೆಯನ್ನು ಹಿಡಿದು ಮುಂದಕ್ಕೆ ಹೋಗಲಾಗದ ಶಿವರಾಜ್ ಮತ್ತೆ ವೈನ್ ಶಾಪ್‌ಗೆ ನುಗ್ಗಿ ಕಂಠಪೂರ್ತಿ ಮದ್ಯ ಇಳಿಸಿದ್ದಾನೆ. ಅಲ್ಲಿಂದ ಹೊರ ಬರುವಾಗ ಕಂಕನಾಡಿ ಠಾಣಾ ಪೊಲೀಸರು ಯಾರೋ ಕೊಟ್ಟ ಮಾಹಿತಿಯನ್ನು ಪಡೆದು ವಶಕ್ಕೆ ಪಡೆಯಲು ತಯಾರಾಗಿ ನಿಂತು ಈತನನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಅಲ್ಲಿ ತಾನು ಒಂದು ಬಂಡಲ್ ಹಣವನ್ನು ಕೂಲಿ ಕಾರ್ಮಿಕನಿಗೆ ನೀಡಿದ್ದನ್ನು ಆತ ತಿಳಿಸಿದ್ದಾನೆ. ಆದರೆ ಆತನನ್ನು ಹುಡುಕಾಡಿದರೂ ಈವರೆಗೆ ಪತ್ತೆಯಾಗಿಲ್ಲ. ಇದೀಗ ಹಣ ಕಂಕನಾಡಿ ಠಾಣೆಯಲ್ಲಿದೆ. ಆದರೆ ಈವರೆಗೆ ಹಣದ ವಾರಸುದಾರರ ಪತ್ತೆಯಿಲ್ಲ. ದೂರೂ ದಾಖಲಾಗಿಲ್ಲ. ಈವರೆಗೆ ಪೊಲೀಸರು ಪ್ರಕರಣವನ್ನೂ ದಾಖಲಿಸಿಲ್ಲ ಎಂದು ಹೇಳಲಾಗುತ್ತಿದೆ.

ಮೆಕ್ಯಾನಿಕ್ ಆಗಿರೋ ಶಿವರಾಜ್ ಕುಡಿತದ ದಾಸ. ಪತ್ನಿ‌ ಮೃತಪಟ್ಟಿದ್ರೆ ಇದ್ದ ಓರ್ವ ಪುತ್ರಿ ಪಿಯು ಸ್ಟೂಡೆಂಟ್. ಮನೆಗೆ ಹೋಗದೇ ಹೊಟೇಲ್ ನಲ್ಲಿ ಚಹಾ, ತಿಂಡಿ. ಬಸ್ ಗಳಲ್ಲೇ ನಿದ್ದೆ. ಈ ಮಧ್ಯೆ ಅದೃಷ್ಟವೆಂಬಂತೆ ಸಿಕ್ಕಿದ ಹಣ ಪೊಲೀಸರ ಬಳಿಯಲ್ಲಿದೆ. ಅತ್ತ ಪೊಲೀಸ್ರು ಒಂದು ಬಂಡಲ್ ಕೊಂಡು ಹೋದ ವ್ಯಕ್ತಿಯನ್ನು ಕರೆದುಕೊಂಡು ಬಂದ್ರೆ ಹಣ ಕೊಡ್ತೇನೆ ಅಂತಿದ್ದಾರಂತೆ. ಇದು ಹುಂಡಿ ಹಣನಾ..? ಅಥವಾ ಬೇರೆ ಹಣನಾ..? ತನಿಖೆ ಪಾರದರ್ಶಕವಾಗಿ‌ ನಡೆಯಬೇಕಷ್ಟೇ.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version