10:08 PM Wednesday 22 - October 2025

ಡ್ರಗ್ಸ್ ಪೆಡ್ಲರ್, ನೈಜೀರಿಯಾ ದೇಶದ ಮಹಿಳೆಯನ್ನು ಬಂಧಿಸಿದ ಮಂಗಳೂರು ಸಿಸಿಬಿ ಪೊಲೀಸರು

zara
03/09/2023

‘ಡ್ರಗ್ಸ್ ಫ್ರಿ ಮಂಗಳೂರು’ ಮಾಡುವ ನಿಟ್ಟಿನಲ್ಲಿ ಇತ್ತೀಚಿಗಿನ ದಿನಗಳಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ ಮಾದಕ ವಸ್ತು ಎಂಡಿಎಂಎ ಮಾರಾಟ/ಸಾಗಾಟ ಜಾಲದಲ್ಲಿನ ಪ್ರಮುಖ ಡ್ರಗ್ಸ್ ಪೆಡ್ಲರ್ ನೈಜೀರಿಯಾ ದೇಶದ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮಂಗಳೂರು ಸಿಸಿಬಿ ಪೊಲೀಸರು ಇತ್ತೀಚೆಗಿನ ದಿನಗಳಲ್ಲಿ ಮಂಗಳೂರು ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಪ್ರಮುಖ ಡ್ರಗ್ಸ್ ಪೆಡ್ಲರ್ ಗಳನ್ನು ಪತ್ತೆ ಹಚ್ಚಿ ಲಕ್ಷಾಂತರ ಮೌಲ್ಯದ ಮಾದಕ ವಸ್ತು ಎಂಡಿಎಂಎ ನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಡ್ರಗ್ ದಂಧೆಯ ಕಿಂಗ್ ಪಿನ್ ನ್ನು ಪತ್ತೆ ಹಚ್ಚುವ ಸಲುವಾಗಿ ತನಿಖೆಯನ್ನು ಕೈಗೊಂಡು ಮಾಹಿತಿಯನ್ನು ಸಂಗ್ರಹಿಸಿದ ಸಮಯ ಈ ಮಾದಕ ವಸ್ತುಗಳನ್ನು ಆರೋಪಿಗಳಿಗೆ ನೈಜಿರಿಯಾ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ವಿದೇಶಿ ಮಹಿಳೆಯೋರ್ವಳು  ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ  (Methylene dioxy methamphetamine) MDMA ಎಂಬ ನಿಷೇದಿತ ಮಾದಕ ವಸ್ತುವನ್ನು ಹೊಂದಿದ್ದ ನೈಜೀರಿಯಾದ ಅಡೆವೊಲೆ ಅಡೆಟುಟು ಆನು @ ರೆಜಿನಾ ಜರಾ @ ಆಯಿಶಾ(33) ಎಂಬಾಕೆಯನ್ನು ಬೆಂಗಳೂರಿನಿಂದ ವಶಕ್ಕೆ ಪಡೆದುಕೊಂಡು ಆಕೆಯ ವಶದಿಂದ ಒಟ್ಟು 400 ಗ್ರಾಂ ತೂಕದ ರೂ. 20,00,000/-ಮೌಲ್ಯದ ಎಂಡಿಎಂಎ ಮಾದಕ ವಸ್ತು, ಐಫೋನ್-1, ನಗದು ರೂ. 2910/- ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 20,52,910/-ಆಗಬಹುದು.

ಈಕೆಯು ನೈಜೇರಿಯಾ ದೇಶದ ಪ್ರಜೆಯಾಗಿದ್ದು, ಈಕೆಯು ವ್ಯಾಸಂಗ ವೀಸಾದಡಿಯಲ್ಲಿ ಭಾರತಕ್ಕೆ ಬಂದು ವಿದ್ಯಾಭ್ಯಾಸ ಮಾಡಿಕೊಂಡು ನಂತರ ಇಲ್ಲಿ ಸ್ವಲ್ಪ ಸಮಯ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದಳು  ಈ ನರ್ಸಿಂಗ್ ಕೆಲಸವನ್ನು ಬಿಟ್ಟು ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿರುವುದಾಗಿದೆ. ಈಕೆಯ ವಿರುದ್ಧ ಪ್ರಸ್ತುತ ಮಂಗಳೂರು ನಗರದ ಉಳ್ಳಾಲ, ಸೆನ್ ಪೊಲೀಸ್ ಠಾಣೆ, ಮಂಗಳೂರು ಉತ್ತರ, ಕಂಕನಾಡಿ ನಗರ, ಕೊಣಾಜೆ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಈ 7 ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ಈಕೆಯಿಂದಲೇ ಮಾದಕ ವಸ್ತುವನ್ನು ಖರೀದಿಸಿರುವುದಾಗಿದೆ. ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ.

ಈ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ಯವರಾದ ರಾಜೇಂದ್ರ ಬಿ, ಶರಣಪ್ಪ ಭಂಡಾರಿ, ಸುದೀಪ್ ಎಂ ವಿ, ನರೇಂದ್ರ  ಹಾಗೂ ಸಿಸಿಬಿ ಸಿಬ್ಬಂದಿಯವರು  ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

Exit mobile version