ಮಣಿಪುರ ಮಹಿಳೆಯರ ನಗ್ನ ಪ್ರಕರಣ: ಸಿಬಿಐನಿಂದ ದಂಗುಬಡಿಸುವ ಮಾಹಿತಿ ಔಟ್

ಮಣಿಪುರದಲ್ಲಿ ಕುಕಿ ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ನಡೆಸಿದ ಪ್ರಕರಣದ ಕುರಿತಂತೆ ಸಿಬಿಐ ದಂಗುಬಡಿಸುವ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಆ ಸ್ಥಳದಲ್ಲಿ ಪೊಲೀಸ್ ವಾಹನ ಇತ್ತು. ಅಲ್ಲದೇ ಸಂತ್ರಸ್ತರು ರಕ್ಷಣೆಯನ್ನು ಕೋರಿ ಪೊಲೀಸ್ ವಾಹನದ ಹತ್ತಿರ ಬಂದಿದ್ದರು. ಆದರೆ ತಮ್ಮಲ್ಲಿ ಕೀ ಇಲ್ಲ ಎಂದು ಹೇಳಿ ಪೊಲೀಸರು ಆ ಮಹಿಳೆಯರನ್ನು ದುಷ್ಕರ್ಮಿಗಳಿಗೆ ಬಿಟ್ಟುಕೊಟ್ಟರು ಎಂದು ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿದೆ.
ಕುಕಿ ಮತ್ತು ಝೋಮಿ ಸಮುದಾಯಗಳ ಮನೆಗಳನ್ನು ಬೆಂಕಿ ಕೊಟ್ಟು ಸುಟ್ಟು ಹಾಕುತ್ತಾ ದುಷ್ಕರ್ಮಿಗಳ ಗುಂಪು ಕೇಕೆ ಹಾಕಲು ತೊಡಗಿದಾಗ ಮಕ್ಕಳು ಮತ್ತು ಮಹಿಳೆಯರು ಕಾಡಿನತ್ತ ಪಲಾಯನ ಮಾಡಿದ್ದರು. ಶಸ್ತ್ರಧಾರಿಗಳಾಗಿದ್ದ ಈ ದುಷ್ಕರ್ಮಿಗಳು ಈ ಮಹಿಳೆಯರು ಮತ್ತು ಮಕ್ಕಳನ್ನು ಕಾಡಿನಿಂದ ಎಳೆದು ಹೊರತಂದಿದ್ದಾರೆ. ಆ ಬಳಿಕ ಮಹಿಳೆಯರನ್ನು ನಗ್ನಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ. 2023 ಮೇ ಮೂರರಂದು ಚುರಚಂದಪುರದಲ್ಲಿ ಈ ಘಟನೆ ನಡೆದಿದೆ ಎಂದು ಸಿಬಿಐ ದೋಷಾರೋಪಣಾ ಪತ್ರದಲ್ಲಿ ತಿಳಿಸಿದೆ.
ಖಾಕಿ ಡ್ರೆಸ್ ಧರಿಸಿದ್ದ ಓರ್ವ ಡ್ರೈವರ್ ನೊಂದಿಗೆ ಇಬ್ಬರು ಪೊಲೀಸರು ಜೀಪಿನಲ್ಲಿ ಕುಳಿತಿದ್ದರೆ ಮೂರ್ ನಾಲ್ಕು ಮಂದಿ ಪೊಲೀಸರು ಹೊರಗಡೆ ಇದ್ದರು. ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರ ಸಹಿತ ನಾಲ್ಕು ಮಂದಿ ಈ ಪೊಲೀಸರಲ್ಲಿ ಅಭಯ ಯಾಚಿಸಿದರು. ದಯವಿಟ್ಟು ಪೊಲೀಸ್ ಜೀಪನ್ನು ಚಲಾಯಿಸಿ ಎಂದು ಸಂತ್ರಸ್ತರಲ್ಲಿ ಓರ್ವರು ಹೇಳಿದಾಗ ನಮ್ಮಲ್ಲಿ ಕೀ ಇಲ್ಲ ಎಂದು ಡ್ರೈವರ್ ಹೇಳಿದ. ಅದೇ ವೇಳೆ ದುಷ್ಕರ್ಮಿಗಳು ಇವರಲ್ಲಿ ಒಬ್ಬರನ್ನು ಥಳಿಸಲು ಪ್ರಾರಂಭಿಸಿದರು. ಆ ಬಳಿಕ ಜೀಪನ್ನು ಒಂದಷ್ಟು ದೂರ ಕೊಂಡೊಯ್ದ ಡ್ರೈವರ್ ಸಾವಿರದಷ್ಟು ಇದ್ದ ದುಷ್ಕರ್ಮಿಗಳ ಬಳಿ ಜೀಪನ್ನು ನಿಲ್ಲಿಸಿದ. ಇಲ್ಲೇಕೆ ನಿಲ್ಲಿಸಿದಿರಿ ಎಂದು ಪ್ರಶ್ನಿಸಿದಾಗ ಬಾಯಿಮುಚ್ಚುವಂತೆ ಪೊಲೀಸ್ ದಬ್ಬಾಯಿಸಿದ. ಬಳಿಕ ದುಷ್ಕರ್ಮಿಗಳ ಗುಂಪು ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಜೀಪಿನಿಂದ ಎಳೆದು ಹೊರ ಹಾಕಿದೆ. ಮಹಿಳೆಯರ ಬಟ್ಟೆಯನ್ನು ಹರಿದು ನಗ್ನಗೊಳಿಸಿ ಪುರುಷರನ್ನು ಥಳಿಸಿದ್ದಾರೆ ಎಂದು ದೋಷಾರೋಪಣಾ ಪತ್ರದಲ್ಲಿ ತಿಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುವಾಹಾಟಿಯ ವಿಶೇಷ ನ್ಯಾಯಾಲಯದಲ್ಲಿ ಆರು ಮಂದಿ ಯುವಕರು ಮತ್ತು ಓರ್ವ ಅಪ್ರಾಪ್ತನ ವಿರುದ್ಧ ದೋಷಾರೋಪಣೆ ಸಲ್ಲಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth