1:57 PM Wednesday 9 - September 2026

ನೆಲ್ಯಾಡಿ ಯು ಟರ್ನ್ ಗಾಗಿ ಬೃಹತ್ ಪ್ರತಿಭಟನೆ: ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವ್ಯಾಪಕ ಆಕ್ರೋಶ

nelyadi
09/09/2026

ನೆಲ್ಯಾಡಿ: ಇಲ್ಲಿನ ಸೈಂಟ್ ಜಾರ್ಜ್ ಕಾಲೇಜು ಹಾಗೂ ಬೆಥನಿ ವಿದ್ಯಾಸಂಸ್ಥೆಯ ನಡುವಿನ ರಸ್ತೆಯಲ್ಲಿ ಯು–ಟರ್ನ್ ಮಾಡಲೇಬೇಕು ಎಂದು ಒತ್ತಾಯಿಸಿ, ಸೆಪ್ಟೆಂಬರ್ 9ರ ಬುಧವಾರದಂದು ಕಡಬ ತಾಲೂಕಿನ ನೆಲ್ಯಾಡಿಯ ವಿದ್ಯಾನಗರದಲ್ಲಿ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸೈಂಟ್ ಅಲ್ಫೋನ್ಸ ಚರ್ಚ್ ನ ಫಾದರ್ ಶಾಜಿ ಮಾಥ್ಯು  ಅವರು ಮಾತನಾಡಿ, ಮಂಗಳೂರು–ಬೆಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣದಿಂದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಸಂಪರ್ಕ ಕಡಿತಗೊಂಡಿದೆ,  ನೆಲ್ಯಾಡಿ ಉಪನಗರವನ್ನು ಎರಡು ಭಾಗಗಳಾಗಿ ವಿಂಗಡಿಸಿರುವುದರಿಂದ ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದರು.

ವಾಹನಗಳ ಸುಲಭ ಸಂಚಾರ, ಸಮಯ ಮತ್ತು ಇಂಧನ ಉಳಿತಾಯಕ್ಕಾಗಿ ನೆಲ್ಯಾಡಿಯಲ್ಲಿ ‘ಯು-ಟರ್ನ್’ (U-Turn) ನಿರ್ಮಿಸಬೇಕು ಎಂಬುದು ಇಲ್ಲಿನ ಜನರ ಏಕೈಕ ಮತ್ತು ಅಚಲ ಬೇಡಿಕೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಎಲಿವೇಟೆಡ್ ಹೈವೇ ಆದ ಬಳಿಕ ನೆಲ್ಯಾಡಿ ಪಟ್ಟಣವು ಇಬ್ಬಾಗವಾಗಿದ್ದು, ಯಾವುದೇ ರೀತಿಯ ಸಹಕಾರ ಅಥವಾ ಸಾರ್ವಜನಿಕರ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.  ಹೆದ್ದಾರಿ ಕಾಮಗಾರಿ ಆರಂಭವಾದಾಗಿನಿಂದಲೂ ನೆಲ್ಯಾಡಿ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆಬ್ಬಾಗಿಲಿನಲ್ಲಿ ಯು-ಟರ್ನ್ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದರು.

ಹೈವೆ ಅಧಿಕಾರಿಗಳು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಆಡಳಿತ ಸಿಬ್ಬಂದಿ ನಾಗರಿಕರ ವಿಶ್ವಾಸವನ್ನು ತೆಗೆದುಕೊಂಡು ಈ ಬಗ್ಗೆ ಧ್ವನಿ ಎತ್ತಬೇಕಿದೆ.  ಇದು ಯಾವುದೇ ವ್ಯಕ್ತಿಯ ವಿರುದ್ಧದ ಹೋರಾಟವಲ್ಲ, ಬದಲಿಗೆ ನಮ್ಮ ಹಕ್ಕೊತ್ತಾಯಕ್ಕಾಗಿ ಶಾಂತಿಯುತವಾಗಿ ನಡೆಸುತ್ತಿರುವ ಸಭೆಯಾಗಿದೆ.  ನೆಲ್ಯಾಡಿಯ ಮುಂದಿನ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳ ಅನುಕೂಲಕ್ಕಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ವಿನಂತಿಸಿದರು.

ಸ್ಥಳೀಯ ಜನಪ್ರತಿನಿಧಿ ಮಾತನಾಡಿ,  ಈಗಾಗಲೇ ನಾವು 15 ದಿವಸಗಳ ಹಿಂದೆ ಅಧಿಕಾರಿಗಳಿಗೆ, ಎಸ್ಪಿ ಅವರಿಗೆ ಹಾಗೂ ಎಲ್ಲಾ ಜನಪ್ರತಿನಿಧಿಗಳಿಗೂ ಕೂಡ ನಾವು ಮನವಿಯನ್ನು ಕೊಟ್ಟಿದ್ದೇವೆ.  ಆದರೂ ಕೂಡ, ಇನ್ನೂ ಕೂಡ ಬಂದು ನಮಗೆ ಸಮಾಧಾನವನ್ನ ಮಾಡುವಂತಹ ಕೆಲಸ ಮಾಡಬಹುದಿತ್ತು. ಇಚ್ಛಾಶಕ್ತಿಯ ಕೊರತೆಯಿಂದ ಆ ಕೆಲಸವನ್ನ ಅಧಿಕಾರಿ ವರ್ಗ ಮಾಡಲಿಲ್ಲ. ನಾವು ಕಳೆದ ಕೆಲವು ವರ್ಷಗಳಿಂದ ಇಲ್ಲಿ ನಮ್ಮ ನ್ಯಾಷನಲ್ ಹೈವೇಯಲ್ಲಿ ಹಾದುಹೋಗುವಾಗ, ಇಲ್ಲಿ ನಮಗೆ ಫೈಓವರ್ ಬೇಕು ಅಂತ ಹೇಳಿ ಬೆಂಗಳೂರಿಗೆ, ಮಂಗಳೂರಿಗೆ ಆದಷ್ಟು ಸ್ಥಳಗಳಿಗೆ ಹೋಗಿ ನಮ್ಮ ಮನವಿಯನ್ನು ಅರ್ಪಿಸಿ ಇಲ್ಲಿ ಪ್ರತಿಭನೆಯನ್ನು ಮಾಡಿದರು ಕೂಡ, ಆ ಫೈಓವರ್ ಅನ್ನು ಬಿಟ್ಟುಬಿಟ್ಟು ನಮಗೆ ಮೂರು ಗಂಡಿಗಳನ್ನು ಮಾಡಿಕೊಟ್ರು. ಅದು ಕೂಡ ನಮ್ಮನ್ನ ಯಾವ ರೀತಿಯಲ್ಲಿ ನೋಡಿದ್ದಾರೆ ನಮಗೆ ಗೊತ್ತಿದೆ ಈಗಾಗಲೇ. ನಾವು ಹೋಗುವಂತ ಕಲ್ಲಡ್ಕದಲ್ಲಿ ಮೂರು ಕಿಲೋಮೀಟರ್ ಬಿಡುವಷ್ಟು ಫೈಓವರ್ ಅನ್ನು ಮಾಡಿದ್ದಾರೆ. ಯಾಕೆ ಅಷ್ಟು ಅಗತ್ಯ ಇತ್ತಾ ಅಲ್ಲಿ? ನಾವು ಆಲೋಚನೆಯನ್ನ ಮಾಡಬೇಕಾದದ್ದು.  ಆದರೆ ನಮಗೆ ಇಲ್ಲಿ ಒಂದು ಕಿಲೋಮೀಟರ್ ಬರುವುದಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಎಲ್ಲ ಧರ್ಮದ ಧಾರ್ಮಿಕ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಸ್ಥಳೀಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಯು—ಟರ್ನ್ ಗಾಗಿ ಧ್ವನಿ ಎತ್ತಿದರು.

ನೆಲ್ಯಾಡಿಯಲ್ಲಿ ಯು ಟರ್ನ್ ಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ


ಇಂದು ಬೆಳಗ್ಗೆ ಆರಂಭವಾದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಹೈವೆ ಬಳಿ ಜಮಾಯಿಸಿ ಘೋಷಣೆ ಕೂಗಿದರು. ಈ ವೇಳೆ ರಸ್ತೆ ತಡೆ ನಡೆಸದಂತೆ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಮನವಿ ಮಾಡಿಕೊಂಡ ಹಿನ್ನೆಲೆ, ಪ್ರತಿಭಟನೆಯನ್ನು ಗಾಂಧಿ ಮೈದಾನದ ಬಳಿ ಹೈವೇ ರಸ್ತೆ ಬದಿಯಲ್ಲಿ  ನಡೆಸಲಾಯಿತು. ಪ್ರತಿಭಟನಾಕಾರರು ಬಿಸಿಲಿನಲ್ಲಿ ಕಾಯುತ್ತಿದ್ದರೂ, ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯು—ಟರ್ನ್  ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಲಭ್ಯವಾಗುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಪ್ರತಿಭಟನೆಯನ್ನು ವಿಸ್ತರಿಸಿ, ಉಪವಾಸ ಸತ್ಯಾಗ್ರಹವನ್ನೂ ಕೈಗೊಳ್ಳುವ ಎಚ್ಚರಿಕೆ ನೀಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version