ಬಟ್ಟೆ ಸ್ವಚ್ಛವಾಗಿಲ್ಲ ಎಂದು ರೈತನನ್ನು ಒಳಗೆ ಬಿಡದ ಮೆಟ್ರೋ ಸಿಬ್ಬಂದಿ ಅಮಾನತು!

namma mettro
26/02/2024

ಬೆಂಗಳೂರು: ಬಟ್ಟೆ ಸ್ವಚ್ಛವಾಗಿಲ್ಲ ಎಂದು ರೈತನನ್ನು ಮೆಟ್ರೋ ಪ್ರವೇಶಿಸಲು ಬಿಡದ ಮೆಟ್ರೋ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ ಎಂದು ಎಂಡಿ ಮಹೇಶ್ವರನ್ ಹೇಳಿದ್ದಾರೆ.

ಹಾಕಿಕೊಂಡಿರುವ ಬಟ್ಟೆ ಕ್ಲೀನ್‌ ಇಲ್ಲ ಎಂಬ ಕಾರಣಕ್ಕಾಗಿ ರೈತರೊಬ್ಬರನ್ನು ಮೆಟ್ರೋ ಪ್ರವೇಶಿಸಲು ಅವಕಾಶ ನೀಡದೆ ಅಪಮಾನ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಬಗ್ಗೆ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮೆಟ್ರೋ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಕ್ರಮಕೈಗೊಂಡಿದೆ.

ಬೆಂಗಳೂರಿನ ರಾಜಾಜಿ ನಗರದ ಮೆಟ್ರೋ ಸ್ಟೇಷನ್‌ ನಲ್ಲಿ ಮೆಟ್ರೋ ಸಿಬ್ಬಂದಿ  ರೈತನ ಬಟ್ಟೆಯನ್ನು ನೋಡಿ ಮೆಟ್ರೋ ನಿಲ್ದಾಣದೊಳಗೆ ಬಿಡದೇ ಮನುವಾದೀಯ ವರ್ತನೆ ತೋರಿದ್ದು,  ಈ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು.




ತಲೆಯ ಮೇಲೆ ಬಟ್ಟೆಯ ಮೂಟೆಯೊಂದನ್ನು ಹೊತ್ತುಕೊಂಡು ಬಂದ ವ್ಯಕ್ತಿಯನ್ನು  ಮೆಟ್ರೋ ಸುರಕ್ಷತಾ ತಪಾಸಣೆ ಸಿಬ್ಬಂದಿ ತಡೆದಿದ್ದು,  ಅವರನ್ನು ಯಾಕೆ ಒಳಗೆ ಬಿಡುತ್ತಿಲ್ಲ ಎಂದು ಸಹ ಪ್ರಯಾಣಿಕರು ಪ್ರಶ್ನಿಸಿದಾಗ ಅವರ ಬಟ್ಟೆ ಗಲೀಜಾಗಿದೆ, ಹೀಗಿದ್ದರೆ ಸಹ ಪ್ರಯಾಣಿಕರಿಗೆ ಅಸಹ್ಯವಾಗುತ್ತದೆ. ಆ ಕಾರಣಕ್ಕಾಗಿ ಒಳಗೆ ಬಿಡಲಾಗುತ್ತಿಲ್ಲ ಎಂದು ಸಿಬ್ಬಂದಿ ಉತ್ತರಿಸಿದ್ದರು.

ಮೆಟ್ರೋ ಪ್ರಯಾಣಿಕರು ಯಾವ ರೀತಿಯ ಬಟ್ಟೆ ಧರಿಸಬೇಕು ಎಂದು ಎಲ್ಲಾದರೂ ನಿಯಮವಿದೆಯಾ ಎಂದು ಸಹ ಪ್ರಯಾಣಿಕರು ಪ್ರಶ್ನಿಸಿದ್ದರು. ಇದೀಗ ಮೆಟ್ರೋ ಸಂಸ್ಥೆ ಇಂತಹ ಭೇದ ಭಾವಗಳನ್ನು ಮಾಡುವ ಸಿಬ್ಬಂದಿಯನ್ನು ಹೊರಗಟ್ಟಿದ್ದು, ಜನರ ಬಡತನವನ್ನು ನೋಡಿ ಅವಮಾನಿಸುವ ಪ್ರವೃತ್ತಿಗೆ ತಕ್ಕ ಉತ್ತರ ನೀಡಿದಂತಾಗಿದೆ.

ಇತ್ತೀಚಿನ ಸುದ್ದಿ

Exit mobile version