ನಾವು ಒಂದಾಗುವುದು ಇಷ್ಟವಿಲ್ಲದ ಕಿಡಿಗೇಡಿಗಳು ವಿವಾದ ಸೃಷ್ಟಿಸುತ್ತಿದ್ದಾರೆ: ಕಿಚ್ಚ ಸುದೀಪ್ ಸ್ಪಷ್ಟನೆ
ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಹುಬ್ಬಳ್ಳಿಯ ಕಾರ್ಯಕ್ರಮವೊಂದರಲ್ಲಿ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಈಗ ಮೌನ ಮುರಿದಿರುವ ಸುದೀಪ್, “ನಾನು ನಟ ದರ್ಶನ್ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯ ವೇದಿಕೆಯಲ್ಲಿ ಸುದೀಪ್ ಅವರು ‘ಪೈರಸಿ’ ಕುರಿತು ಮಾತನಾಡಿದ್ದರು. ಆದರೆ, ಇದನ್ನು ಕೆಲವರು ದರ್ಶನ್ ಮತ್ತು ಅವರ ಅಭಿಮಾನಿಗಳ ವಿರುದ್ಧ ನೀಡಿದ ಹೇಳಿಕೆ ಎಂದು ತಪ್ಪಾಗಿ ಅರ್ಥೈಸಿದ್ದರು. ಈ ಬಗ್ಗೆ ಕಿಡಿಕಾರಿದ ಸುದೀಪ್, “ನನ್ನ ಇಡೀ ವೃತ್ತಿಜೀವನದ ಇತಿಹಾಸವನ್ನು ಕೆದಕಿ ನೋಡಿ, ಆ ವ್ಯಕ್ತಿಯ (ದರ್ಶನ್) ಬಗ್ಗೆ ನಾನು ಎಲ್ಲಾದರೂ ಒಂದು ಕೆಟ್ಟ ಪದ ಬಳಸಿದ್ದರೆ ತೋರಿಸಿ” ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ನಮ್ಮಿಬ್ಬರ ಮಧ್ಯೆ ವೈಯಕ್ತಿಕವಾಗಿ ಭಿನ್ನಾಭಿಪ್ರಾಯಗಳು ಇರಬಹುದು, ಅದು ನಮಗೆ ಸಂಬಂಧಿಸಿದ್ದು. ಆದರೆ ನಾನು ಅಷ್ಟು ದಡ್ಡನಲ್ಲ. ಸಿನಿಮಾ ರಂಗದಲ್ಲಿ ನಾವಿಬ್ಬರೂ ಪರಸ್ಪರ ಗೌರವದಿಂದಲೇ ಇದ್ದೇವೆ. ನಮ್ಮಿಬ್ಬರ ಅಭಿಮಾನಿಗಳು ಪರಸ್ಪರ ಪ್ರೀತಿಸುತ್ತಾರೆ. ಆದರೆ ಕೆಲವು ಕಿಡಿಗೇಡಿಗಳು ನಾವು ಒಂದಾಗುವುದು ಇಷ್ಟವಿಲ್ಲದೆ ಇಂತಹ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ದರ್ಶನ್ ಅವರ ಪ್ರಸ್ತುತ ಸ್ಥಿತಿಯ ಬಗ್ಗೆಯೂ ಮಾತನಾಡಿದ ಸುದೀಪ್, “ಅವರ ಅಭಿಮಾನಿಗಳು ನೋವಿನಲ್ಲಿದ್ದಾರೆ ಎಂಬುದು ನನಗೆ ಗೊತ್ತು. ಆಗಬಾರದ್ದು ನಡೆದುಹೋಗಿದೆ ಎಂಬ ನೋವು ನನಗೂ ಇದೆ” ಎಂದಿದ್ದಾರೆ. ಈ ಮೂಲಕ ತಮ್ಮ ಮತ್ತು ದರ್ಶನ್ ನಡುವಿನ ಸಂಬಂಧದ ಬಗ್ಗೆ ಹಬ್ಬಿದ್ದ ವದಂತಿಗಳಿಗೆ ಸುದೀಪ್ ತೆರೆ ಎಳೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























