10:21 AM Saturday 23 - August 2025

ನೊಂದ ಜನರಿಗೆ ಸಹಾಯಹಸ್ತ: ಫೆಲೆಸ್ತೀನ್ ಜನರಿಗೆ 2.5 ಕೋಟಿ ರೂಪಾಯಿ ದೇಣಿಗೆ ಘೋಷಿಸಿದ ಮಲಾಲಾ ಯೂಸುಫ್‌ಜಾಯ್

19/10/2023

ಫೆಲೆಸ್ತೀನ್ ಜನರಿಗೆ ಸಹಾಯ ಮಾಡಲು ಮೂರು ದತ್ತಿ ಸಂಸ್ಥೆಗಳಿಗೆ 2.5 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜಾಯ್  ಘೋಷಿಸಿದ್ದಾರೆ.

ಈ ಕುರಿತು ಟ್ವಿಟ್ಟರ್ ಎಕ್ಸ್ ನಲ್ಲಿವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಗಾಜಾದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ದಾಳಿಗೆ ವಿಷಾದ ವ್ಯಕ್ತಪಡಿಸಿದರು.
“ಗಾಜಾ ಆಸ್ಪತ್ರೆ ಮೇಲೆ ನಡೆದ ಬಾಂಬ್ ದಾಳಿಯಿಂದ ಗಾಬರಿಗೊಂಡಿದ್ದೇನೆ. ಪ್ರಪಂಚದಾದ್ಯಂತ ಶಾಂತಿ ಬಯಸುವ ಜನರೊಂದಿಗೆ ನಾನಿದ್ದೇನೆ. ಸಾಮೂಹಿಕ ಶಿಕ್ಷೆ ಯಾವತ್ತೂ ಪರಿಹಾರವಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

“ಯುದ್ಧ ಬಂದಾಗಲೆಲ್ಲ ಹೆಚ್ಚು ತೊಂದರೆ ಅನುಭವಿಸುವುದು ಮಕ್ಕಳು. ಯುದ್ಧದಲ್ಲಿ ಸಿಕ್ಕಿಬಿದ್ದಿರುವ ಫೆಲೆಸ್ತೀನ್ ಮತ್ತು ಇಸ್ರೇಲ್ ಮಕ್ಕಳ ಬಗ್ಗೆ ಚಿಂತಿಸುತ್ತಿದ್ದೇನೆ. ಯುದ್ಧವು ಮಕ್ಕಳನ್ನು ಎಂದಿಗೂ ಉಳಿಸುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.

ಗಾಜಾದ ಅರ್ಧದಷ್ಟು ಜನಸಂಖ್ಯೆ 18 ವರ್ಷಕ್ಕಿಂತ ಕೆಳಗಿನವರು. ಅವರು ತಮ್ಮ ಜೀವನದುದ್ದಕ್ಕೂ ಬಾಂಬ್ ಸ್ಫೋಟಗಳ ಮಧ್ಯೆ ಬದುಕುವಂತಾಗಬಾರದು. ಗಾಜಾಕ್ಕೆ ಮಾನವೀಯ ನೆರವು ಮತ್ತು ಕದನ ವಿರಾಮಕ್ಕೆ ಕರೆ ನೀಡಲು ನಾನೂ ಇಸ್ರೇಲ್ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

“ತಮ್ಮ ಬದುಕಿನಲ್ಲಿ ನಡೆದ ಭಯೋತ್ಪಾದನೆಯ ಭಯಾನಕ ದೃಶ್ಯವನ್ನು ನೆನಪಿಸಿಕೊಂಡ ಅವರು ಹಿಂಸೆ ಮತ್ತು ಭಯೋತ್ಪಾದನೆಯನ್ನು ನೋಡಿದಾಗ ನನಗೆ ಕೇವಲ 11 ವರ್ಷ. ನನ್ನ ಶಾಲೆ ಮತ್ತು ಮಸೀದಿಯ ಸ್ಫೋಟವನ್ನು ನಾನು ಕಣ್ಣಾರೆ ನೋಡಿದ್ದೇನೆ. ಈಗ ಶಾಂತಿ ಕಾಪಾಡುವುದೇ ನನ್ನ ಕನಸಾಗಿದೆ” ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version