ಕರ್ನಾಟಕದ 43.8 ಲಕ್ಷ ಮತದಾರರಿಗೆ ನೋಟಿಸ್! ಆಗಸ್ಟ್ 24 ರಿಂದ ವಿಶೇಷ ಪರಿಷ್ಕರಣೆ
ಬೆಂಗಳೂರು: ಕರ್ನಾಟಕದ ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಮುಂದಾಗಿರುವ ಕೇಂದ್ರ ಚುನಾವಣಾ ಆಯೋಗವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ‘ವಿಶೇಷ ಸಾಂದ್ರ ಪರಿಷ್ಕರಣೆ’ (Special Intensive Revision — SIR) ಅಡಿಯಲ್ಲಿ ರಾಜ್ಯದ ಸುಮಾರು 43.8 ಲಕ್ಷ ಮತದಾರರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದು, ಆಗಸ್ಟ್ 24 ರಿಂದ ಈ ಪ್ರಕ್ರಿಯೆ ಆರಂಭವಾಗಲಿದೆ.
ಮುಖ್ಯ ಚುನಾವಣಾಧಿಕಾರಿ (CEO) ಕಚೇರಿಯ ಮಾಹಿತಿ ಪ್ರಕಾರ, ರಾಜ್ಯದ ಒಟ್ಟು 4.5 ಕೋಟಿ ಮತದಾರರ ಪೈಕಿ ಶೇಕಡ 9.8 ರಷ್ಟು, ಅಂದರೆ 43.8 ಲಕ್ಷ ಮತದಾರರಿಗೆ ಈ ನೋಟಿಸ್ ತಲುಪಲಿದೆ. ವಿಶೇಷವೆಂದರೆ, ವಿತರಿಸಲಾಗುವ ಒಟ್ಟು ನೋಟಿಸ್ಗಳಲ್ಲಿ ಅರ್ಧದಷ್ಟು, ಅಂದರೆ 24 ಲಕ್ಷಕ್ಕೂ ಹೆಚ್ಚು ನೋಟಿಸ್ಗಳು ಬೆಂಗಳೂರು ನಗರ ಒಂದರಲ್ಲೇ ಜಾರಿಯಾಗಲಿವೆ. ಬಿಬಿಎಂಪಿ ಉತ್ತರ, ದಕ್ಷಿಣ, ಮಧ್ಯ ವಲಯ ಹಾಗೂ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಇಂತಹ ಮತದಾರರ ಸಂಖ್ಯೆ ಹೆಚ್ಚಿದೆ.
ನೋಟಿಸ್ ಗೆ ಕಾರಣಗಳೇನು?
ಮತದಾರರ ವಿವರಗಳಲ್ಲಿನ ದೋಷಗಳು ಮತ್ತು ಅಸಂಗತತೆಗಳನ್ನು ಸರಿಪಡಿಸುವುದು ಈ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ.
ಎರಡು ವರ್ಗದ ಮತದಾರರಿಗೆ ನೋಟಿಸ್ ಜಾರಿಯಾಗಲಿದೆ: 2002ರ ಮತದಾರರ ಡೇಟಾಗೆ ಮ್ಯಾಪ್ ಮಾಡಲು ಸಾಧ್ಯವಾಗದ ಮತದಾರರು ಮತ್ತು 2002ರ ಪಟ್ಟಿಯೊಂದಿಗೆ ಮ್ಯಾಪ್ ಆಗಿದ್ದರೂ, ತಂದೆಯ ಹೆಸರಿನ ಸ್ಪೆಲ್ಲಿಂಗ್ ವ್ಯತ್ಯಾಸ ಸೇರಿದಂತೆ ಸುಮಾರು 9 ರೀತಿಯ ತಾಂತ್ರಿಕ ದೋಷಗಳು ಕಂಡುಬಂದಿರುವ ಮತದಾರರು.
ಖಾಸಗಿತನದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು, ಮತಗಟ್ಟೆ (Booth) ಹಂತದಲ್ಲಿಯೇ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಆಯೋಗ ಚಿಂತನೆ ನಡೆಸಿದೆ. ನೋಟಿಸ್ ಸ್ವೀಕರಿಸುವ ಮತದಾರರು ಆತಂಕಪಡುವ ಅಗತ್ಯವಿಲ್ಲ. ನೋಟಿಸ್ ಬಂದ ನಂತರ, ನಿಗದಿತ ಸಮಯದೊಳಗೆ ತಮ್ಮ ಸರಿಯಾದ ದಾಖಲೆಗಳನ್ನು ಸಲ್ಲಿಸುವ ಮೂಲಕ ದೋಷಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಆ ಮೂಲಕ ಮುಂಬರುವ ಚುನಾವಣೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲು ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬಹುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























