ದೇಗುಲಗಳಲ್ಲಿ ಪರಿಶಿಷ್ಟ ಜಾತಿಗಳ ಜನರಿಗೆ ಪ್ರವೇಶ ನೀಡಲಾಗುತ್ತಿಲ್ಲ: ಮೋದಿಗೆ ಖರ್ಗೆ ಟಾಂಗ್
ರಾಜಕೀಯದ ಕಾರಣದಿಂದಾಗಿ ಕಾಂಗ್ರೆಸ್ ರಾಮಮಂದಿರದ ಶಂಕುಸ್ಥಾಪನೆಯಲ್ಲಿ ಭಾಗವಹಿಸಲಿಲ್ಲ ಎಂಬ ಮೋದಿಯವರ ಆರೋಪಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. “ಇನ್ನೂ ಅನೇಕ ದೇವಾಲಯಗಳಲ್ಲಿ ಪರಿಶಿಷ್ಟ ಜಾತಿಗಳ ಜನರಿಗೆ ಪ್ರವೇಶ ನೀಡಲಾಗುತ್ತಿಲ್ಲ. ನಾನು ಅಯೋಧ್ಯೆಗೆ ಹೋಗಿದ್ದರೆ ಮೋದಿ ಸಹಿಸಿಕೊಳ್ಳುತ್ತಿದ್ದರೇ” ಎಂದು ಪ್ರಶ್ನಿಸಿದ್ದಾರೆ.
ದೇಶಾದ್ಯಂತ ಪರಿಶಿಷ್ಟ ಜಾತಿಗಳ ಜನರು ಇನ್ನೂ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಪರಿಶಿಷ್ಠರಿಗೆ ದೇವಸ್ಥಾನಗಳಲ್ಲಿ ಈಗಲೂ ಪ್ರವೇಶವಿಲ್ಲ. ಬಿಜೆಪಿ ಸರ್ಕಾರವು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಹಿಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರನ್ನು ‘ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು’ ಎಂಬ ಕಾರಣಕ್ಕೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.“ಅಯೋಧ್ಯೆಯಲ್ಲಿನ ರಾಮ ಮಂದಿರದ ಶಂಕುಸ್ಥಾಪನೆ ಮತ್ತು ಹೊಸ ಸಂಸತ್ ಭವನದ ಉದ್ಘಾಟನೆಗೆ ಮುರ್ಮು ರನ್ನು ಮೋದಿ ಆಹ್ವಾನಿಸಲಿಲ್ಲ. ಈ ಹಿಂದೆ, ಕೋವಿಂದ್ ಅವರಿಗೆ ಹೊಸ ಸಂಸತ್ ಭವನದ ಶಂಕುಸ್ಥಾಪನೆ ಮಾಡಲು ಅವಕಾಶ ನೀಡಲಿಲ್ಲ” ಎಂದು ಹೇಳಿದರು.
“ನನ್ನ ಜನರಿಗೆ ಇಂದಿಗೂ ಎಲ್ಲ ದೇವಾಲಯಗಳಲ್ಲಿ ಪ್ರವೇಶವಿಲ್ಲ. ರಾಮಮಂದಿರವನ್ನು ಬಿಡಿ, ನೀವು ಎಲ್ಲಿಗೆ ಹೋದರೂ, ಪ್ರವೇಶಕ್ಕಾಗಿ ಹೋರಾಟ ಮಾಡಬೇಕು. ಹಳ್ಳಿಯಲ್ಲಿ ಸಣ್ಣ ದೇವಾಲಯಗಳಿಗೂ ಅಲ್ಲಿನ ಪ್ರಬಲ ಜಾತಿಯವರು ಅನುಮತಿಸುವುದಿಲ್ಲ. ಕುಡಿಯುವ ನೀರಿಗೆ ಅವಕಾಶ ನೀಡುವುದಿಲ್ಲ. ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡುವುದಿಲ್ಲ. ಕುದುರೆ ಮೇಲೆ ಮೆರವಣಿಗೆ ಹೋಗುವ ಮದುಮಗನನ್ನು ಸಹ ನೀವು ಸಹಿಸುವುದಿಲ್ಲ. ಜನರು ಅವರನ್ನು ಎಳೆದುಕೊಂಡು ಹೊಡೆಯುತ್ತಾರೆ. ದಲಿತರು ಮೀಸೆ ಬಿಟ್ಟರೆ ಸಹಿಸುವುದಿಲ್ಲ. ನಾನು ರಾಮಮಂದಿರಕ್ಕೆ ಹೋಗಿದ್ದರೆ, ಅವರು ಸಹಿಸಿಕೊಳ್ಳುತ್ತಿದ್ದರೇ” ಎಂದು ಖರ್ಗೆ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

























