ಪೊಲೀಸ್ ಇಲಾಖೆಯ ಗಸ್ತು ವಾಹನ 112ನ್ನೆ ಅಪಹರಿಸಿದ ಭೂಪ!

ತುಮಕೂರು: ಜಿಲ್ಲಾ ಪೊಲೀಸ್ ಇಲಾಖೆಯ ಗಸ್ತು ವಾಹನವಾಗಿರೋ 112 ವಾಹನವನ್ನೆ ವ್ಯಕ್ತಿಯೊಬ್ಬ ಅಪಹರಿಸಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ ನಡೆದಿದೆ.
ಮುನಿಯ ಎಂಬಾತನೇ 112 ವಾಹನವನ್ನು ಅಪಹರಿಸಿದ ಅಸಾಮಿ ಆಗಿದ್ದಾನೆ. ತಡರಾತ್ರಿ ಗ್ರಾಮದ ಸಹೋದರಿಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಈ ವೇಳೆ ಆರೋಪಿ ಸಹೋದರ 112 ಗೆ ಕರೆ ಮಾಡಿದ್ದನು. ಜಗಳ ಬಿಡಿಸಲು ಗ್ರಾಮಕ್ಕೆ 112 ವಾಹನದಲ್ಲಿ ಪೊಲೀಸರು ಬಂದಿದ್ದರು. ಈ ವೇಳೆ 112 ವಾಹನದ ಹಿಂಬದಿಯ ಗಾಜನ್ನು ಮುನಿಯ ಹೊಡೆದು ಹಾಕಿದ್ದಾನೆ. ಕಾರು ನಿಲ್ಲಿಸಿ ಹಿಂಬದಿಯ ಗಾಜು ನೋಡಲು ಹೋದ ಪೊಲೀಸರು, ಈ ವೇಳೆ ವೇಗವಾಗಿ ಕಾರು ಓಡಿಸಿಕೊಂಡು ಮುನಿಯ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಸತತ ಮೂರು ಗಂಟೆಗಳ ಕಾಲ ಪೊಲೀಸರು ಹುಡುಕಾಟ ನಡೆಸಿದರೂ 112 ವಾಹನ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ನಂತರ ತುಮಕೂರು ತಾಲೂಕಿನ ಹೆಬ್ಬೂರು ಬಳಿ 112 ವಾಹನ ಪತ್ತೆಯಾಗಿದೆ. ಸಿಎಸ್ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಹೋದರಿಬ್ಬರ ಗಲಾಟೆ ನಡೆದಿತ್ತು. ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.