ಜನಪ್ರಿಯ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ

ಕಾಮಿಡಿ ಕಿಲಾಡಿಗಳು ಸೀಸನ್ –3’ ವಿನ್ನರ್, ಹಿಟ್ಲರ್ ಕಲ್ಯಾಣ ಸೇರಿದಂತೆ ಸಿನಿಮಾಗಳು, ಧಾರಾವಾಹಿಗಳಲ್ಲಿ ಕಾಮಿಡಿ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಕರಾವಳಿಯ ಜನಪ್ರಿಯ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸ್ನೇಹಿತನ ಮದುವೆ ಹಿನ್ನೆಲೆಯಲ್ಲಿ ಮೆಹಂದಿ ಕಾರ್ಯಕ್ರಮವೊಂದರಲ್ಲಿ ನಟ ರಾಕೇಶ್ ಅವರು ಭಾಗಿಯಾಗಿದ್ದರು. ಇದೇ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿ ಎಲ್ಲರ ಜೊತೆ ಖುಷಿಯಿಂದ ಕಾಲ ಕಳೆದಿದ್ದರು. ಆದ್ರೆ, ನಿನ್ನೆ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮದಲ್ಲಿ ದಿಢೀರ್ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದಾರೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ರಾಕೇಶ್ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಕೇಶ್ ಪೂಜಾರಿ ಸಾವಿಗೆ ನಟಿ ರಕ್ಷಿತಾ, ಶಿವರಾಜ್ ಕೆ ಆರ್ ಪೇಟೆ ಸಂತಾಪ ಸೂಚಿಸಿದ್ದಾರೆ.
ಉಡುಪಿ ನಿವಾಸಿಯಾಗಿರುವ ರಾಕೇಶ್ ಪೂಜಾರಿ, ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕ ಏಜೆಯ ಪಿಎ ವಿರೂಪಾಕ್ಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ರಾಕೇಶ್ ಕನ್ನಡದಲ್ಲಿ ಪೈಲ್ವಾನ್, ಇದು ಎಂಥಾ ಲೋಕವಯ್ಯ ಮತ್ತು ತುಳುವಿನಲ್ಲಿ ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೋಕ್ಕೆಲ್ ಮುಂತಾದ ನಾಟಕಗಳು, ಸ್ಕಿಟ್ ಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕರಾವಳಿಯ ರಿಯಾಲಿಟಿ ಶೋಗಳಾದ ಬಲೆ ತೇಲಿಪಾಲೆ, ಮೇ 22, ಸ್ಟಾರ್, ತುಯಿನಾಯೆ ಪೋಯೆ ಇತ್ಯಾದಿ ನಾಟಕದಲ್ಲಿ ಅಭಿನಯಿಸಿದ್ದಾರೆ.
ಇಷ್ಟೇ ಅಲ್ಲದೇ ರಿಷಭ್ ಶೆಟ್ಟಿ ಅವರ ಸಿನಿಮಾ ಕಾಂತಾರ ಫ್ರೀಕ್ವೆಲ್ನಲ್ಲಿ ಮುಖ್ಯ ಪಾತ್ರದಲ್ಲಿ ರಾಕೇಶ್ ಪೂಜಾರಿ ಅಭಿನಯ ಮಾಡಿದ್ದರು. ಈ ಸಿನಿಮಾದಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ರಾಕೇಶ್ ಪೂಜಾರಿ ಕನಸು ಕಂಡಿದ್ದರು. ಕಾಂತಾರ ಫ್ರೀಕ್ವೆಲ್ ಸಿನಿಮಾದ ಶೂಟಿಂಗ್ ಮಾಡುವಾಗ ಮಧ್ಯೆ ಮಧ್ಯೆ ರಾಕೇಶ್ ಪೂಜಾರಿ ಸುಸ್ತಾಗುತ್ತಿದ್ದರು.
ಈ ಕುರಿತು ಹೆಚ್ಚು ಯೋಚನೆ ಮಾಡದ ರಾಕೇಶ್ ಪೂಜಾರಿ ನಿದ್ರೆ, ಊಟ ಸರಿಯಾಗಿ ಇಲ್ಲವೆಂದು ನಿರ್ಲಕ್ಷ್ಯ ಮಾಡಿದ್ದರು. ನಿನ್ನೆ ಕಾರ್ಕಳದಲ್ಲಿ ಮದುವೆ ಸಮಾರಂಭವೊಂದರಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಸ್ಥಳೀಯರು ಎಲ್ಲ ಸೇರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಹೃದಯಾಘಾತವಾಗಿದೆ ಎಂದು ದೃಢ ಪಡಿಸಲಾಗಿತ್ತು.
33 ವರ್ಷದ ರಾಕೇಶ್ಗೆ ತಾಯಿ ಹಾಗೂ ಸಹೋದರಿಯ ಇದ್ದು ಮನೆಗೆ ಆಧಾರಸ್ತಂಭ ಆಗಿದ್ದರು. ಇಡೀ ಮನೆಯ ಜವಾಬ್ದಾರಿ ರಾಕೇಶ್ ಮೇಲಿತ್ತು. ಸದ್ಯ ರಾಕೇಶ್ ಸಾವಿನ ಸುದ್ದಿ ತಿಳಿದು ಇಡೀ ಕುಟುಂಬ ಕಂಗಾಲಾಗಿದೆ. ಕಾಮಿಡಿ ಕಲಾವಿದರ ತಂಡ ಕಂಬನಿ ಮಿಡಿಯುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD