ನಾನು ರಾಜೀನಾಮೆ ನೀಡಿಲ್ಲ, ಆದ್ರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲ್ಲ: ಕೆ.ಅಣ್ಣಾಮಲೈ

annamalai
10/04/2025

ಉಡುಪಿ: ತಮಿಳುನಾಡು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಆದ್ರೆ ಮುಂದೆ ನಡೆಯಲಿರುವ ಅಧ್ಯಕ್ಷ ಸ್ಥಾನ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಕೆ.ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.

ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಅವಧಿ ಮುಗಿದಿದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನ ಚುನಾವಣೆ ಇನ್ನು ನಡೆದಿಲ್ಲ, ರಾಜ್ಯ ಘಟಕದ ಅಧ್ಯಕ್ಷನ ಚುನಾವಣೆ ಯಾವುದೇ ಸಮಯ ನಡೆಯಬಹುದು, ಆದರೆ, ಮುಂದಿನ ಅವಧಿಗೆ ಅಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ ಎಂದರು.

ತಮಿಳುನಾಡಿನಲ್ಲಿ ಚುನಾವಣೆ ಸಮೀಪಿಸುತ್ತಿದೆ. ಬಹಳ ವರ್ಷದಿಂದ ನಾವು ತಾಳ್ಮೆಯಿಂದ ಕಾದಿದ್ದೇವೆ, ಕಾಯುತ್ತೇವೆ. ಇನ್ನೂ 20, 30 ವರ್ಷ ಬೇಕಾದರೂ ಆಗಲಿ, ಅಧಿಕಾರಕ್ಕೆ ಬರುತ್ತೇವೆ. ಪಕ್ಷದ ನಿರ್ಧಾರಕ್ಕೆ ಕಾರ್ಯಕರ್ತರಾಗಿ ಒಪ್ಪಿಗೆ ಕೊಡಬೇಕು. ನಮ್ಮ ಮುಂದಿರುವ ಏಕೈಕ ಗುರಿ ಡಿಎಂಕೆಯನ್ನು ಅಧಿಕಾರದಿಂದ ಇಳಿಸುವುದು. ಹೀಗಾಗಿ ಎಐಡಿಎಂಕೆ ಕೂಡ ಬಿಜೆಪಿ ಜತೆಗೆ ಮೈತ್ರಿ ಬಯಸಿದೆ. ಹಾಗೆಯೇ ಬಿಜೆಪಿ ಕೂಡ ಮೈತ್ರಿಯ ಬಗ್ಗೆ ಒಲವು ತೋರಿಸಿದೆ. ಗೃಹ ಮಂತ್ರಿ ಅಮಿತ್ ಶಾ ಹಾಗೂ ತಮಿಳುನಾಡು ವಿಪಕ್ಷ ನಾಯಕ ಯಡಪ್ಪಾಡಿ ಕೆ. ಪಳನಿಸ್ವಾಮಿಯವರು ಈಗಾಗಲೇ ಭೇಟಿಯಾಗಿ ಮಾತುಕತೆ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಯಾರು ಯಾವ ಜವಾಬ್ದಾರಿ ನಿಭಾಯಿಸಬೇಕು, ಮೈತ್ರಿ ಮಾಡಿಕೊಂಡರೆ ಯಾರು ಸೂಕ್ತ ಎಂಬುದರ ನೆಲೆಯಲ್ಲಿ ತೀರ್ಮಾನಿಸಲಿದೆ. ಪಕ್ಷದ ವರಿಷ್ಠರು ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾವೆಲ್ಲರೂ ಬದ್ಧ ಎಂದು ತಿಳಿಸಿದರು.

ಕರ್ನಾಟಕ ಶ್ರೀಮಂತ ಸಂಸ್ಕೃತಿಯ ನಾಡು. ಇಲ್ಲಿನ ಕಾಂಗ್ರೆಸ್ ಸರಕಾರ ಜನವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಏನೆಲ್ಲ ಮಾಡುತ್ತಿದ್ದಾರೆ ಎಂಬುದನ್ನು ದೇಶದ ಜನರು ನೋಡುತ್ತಿದ್ದಾರೆ. ಸಿಡಿ ಮತ್ತು ಹನಿಟ್ರ್ಯಾಪ್ ಹಗರಣವು ಪ್ರಬಲ ನಾಯಕನೊಬ್ಬ ಅಧಿಕಾರವನ್ನು ಹಿಡಿದಿಟ್ಟುಕೊಳ್ಳುವ ಹತಾಶೆಯ ಸ್ಪಷ್ಟ ಸಂಕೇತವಾಗಿದೆ ಎಂದು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

Exit mobile version