ಮಾದಕ ವಸ್ತು ಎಂಡಿಎಂಎ ಮಾರಾಟ: ಪದವಿ ವಿದ್ಯಾರ್ಥಿ ಸಹಿತ ಮೂವರ ಬಂಧನ

mangalore crime news
20/08/2023

ಮಂಗಳೂರು ನಗರದ ಜೆಪ್ಪು ಮಜಿಲ ರಸ್ತೆ ಬದಿಯಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಪದವಿ ವಿದ್ಯಾರ್ಥಿ ಸಹಿತ ಮೂವರನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ತಲಪಾಡಿಯ ಗುಡ್ಡೆ ಹೌಸ್ ನಿವಾಸಿ ಅಬ್ದುಲ್ ರವೂಫ್(29), ಕೇರಳದ ತಲಶ್ಶೇರಿ ಪಾನೂರು ನಿವಾಸಿ ಉಬೈದ್ ಕುನ್ಮಾಲ್(21) ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೂಡಿಗೆರೆ ಮಾವಿನಕೆರೆ ನಿವಾಸಿ ಮುಹಮ್ಮದ್ ಇರ್ಷಾದ್(21) ಬಂಧಿತ ಆರೋಪಿಗಳು.

ಈ ಪೈಕಿ ಉಬೈದ್ ನಗರದ ಖಾಸಗಿ ಕಾಲೇಜೊಂದರ ಬಿ.ಕಾಂ ಪದವಿ ವಿದ್ಯಾರ್ಥಿ. ಅಬ್ದುರ್ರವೂಫ್ ಡ್ರೈವರ್ ವೃತ್ತಿ ಮಾಡುತ್ತಿದ್ದರೆ, ಇರ್ಷಾದ್ ಚಿಕನ್ ಶಾಪ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ 13,750 ರೂ. ಮೌಲ್ಯದ ಒಟ್ಟು 5.071 ಗ್ರಾಂ MDMA ಮಾದಕ ವಸ್ತು, 1,500 ರೂ. ನಗದು, ತೂಕ ಮಾಪನ, ಮೊಬೈಲ್ ಫೋನ್ ಹಾಗೂ 2 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 1,77,750 ರೂ. ಎಂದು ಪೊಲೀಸರು ಅಂದಾಜಿಸಿದ್ದಾರೆ.

ಆ.18ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಮನೋಹರ್ ಪ್ರಸಾದ್ ಪಿ. ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಜೆಪ್ಪು ಮಜಿಲ ರಸ್ತೆ ಬದಿಯ ‘ಕಿಂಗ್ಸ್ ಗಾರ್ಡನ್’ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಈ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಆ.19ರಂದು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version