10:55 AM Thursday 29 - January 2026

ಕುಡಿದು ಕಾರು ಚಲಾಯಿಸಿ ಸರಣಿ ಅಪಘಾತಕ್ಕೆ ಕಾರಣರಾದ ಉಡೀಸ್ ಸಿನಿಮಾ ಹೀರೋ!

mayur patel
29/01/2026

ಬೆಂಗಳೂರು: ನಗರದ ದೊಮ್ಮಲೂರು ಬಳಿ ಕುಡಿದ ಅಮಲಿನಲ್ಲಿ ಸ್ಯಾಂಡಲ್‌ ವುಡ್ ನಟ ಮಯೂರ್ ಪಟೇಲ್ ಕಾರು ಚಲಾಯಿಸಿ ಸರಣಿ ಅಪಘಾತ ಎಸಗಿದ್ದಾರೆ. ತಡರಾತ್ರಿ ಸಂಭವಿಸಿದ ಈ ಘಟನೆಯಲ್ಲಿ ಮಯೂರ್ ಅವರ ಫಾರ್ಚುನರ್ ಕಾರು ವೇಗವಾಗಿ ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಮೂರ್ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಘಟನೆಯ ವಿವರ: ದೊಮ್ಮಲೂರಿನ ಕಮಾಂಡ್ ಆಸ್ಪತ್ರೆ ಸಮೀಪ ಈ ಅಪಘಾತ ಸಂಭವಿಸಿದೆ. ಮಯೂರ್ ಪಟೇಲ್ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಶ್ರೀನಿವಾಸ್, ಅಭಿಷೇಕ್ ಎಂಬುವವರ ಕಾರುಗಳಿಗೆ ಹಾಗೂ ಒಂದು ಸರ್ಕಾರಿ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ವಾಹನಗಳು ಜಖಂಗೊಂಡಿವೆ. ತಕ್ಷಣವೇ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಪೊಲೀಸರು ಮಯೂರ್ ಪಟೇಲ್ ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಅಪಘಾತಕ್ಕೆ ಒಳಗಾದ ಕಾರಿನ ಮಾಲೀಕ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ ಐಆರ್ ದಾಖಲಾಗಿದ್ದು, ನಟನ ಫಾರ್ಚುನರ್ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಇನ್ಶೂರೆನ್ಸ್ ಇಲ್ಲದ ಕಾರು: ತಪಾಸಣೆಯ ವೇಳೆ ಮಯೂರ್ ಪಟೇಲ್ ಅವರ ಕಾರಿಗೆ ಇನ್ಶೂರೆನ್ಸ್ (ವಿಮೆ) ಕೂಡ ಇಲ್ಲದಿರುವುದು ಬೆಳಕಿಗೆ ಬಂದಿದೆ. ಅಪಘಾತದ ನಂತರ ಕಾರಿನಿಂದ ಇಳಿದ ನಟ, “ಏನೇ ನಷ್ಟವಾಗಿದ್ದರೂ ನಾನು ಸರಿಪಡಿಸಿಕೊಡುತ್ತೇನೆ” ಎಂದು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಮಣಿ’, ‘ಉಡೀಸ್’ ಅಂತಹ ಸಿನಿಮಾಗಳಲ್ಲಿ ನಟಿಸಿದ್ದ ಮಯೂರ್ ಪಟೇಲ್, ಈಗ ಅಜಾಗರೂಕ ಚಾಲನೆಯಿಂದಾಗಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version