ಶಾಲೆ ಶಿಥಿಲಗೊಂಡಿದೆ ಎಂದ ಮುಖ್ಯಶಿಕ್ಷಕ: ಏಣಿ ಹತ್ತಿ ಶಾಲೆ ಮೇಲೇರಿದ ಶಾಸಕ!
24/08/2023
ಚಾಮರಾಜನಗರ: ಶಾಲೆ ಶಿಥಿಲಗೊಂಡಿದೆ ಎಂದು ಮುಖ್ಯ ಶಿಕ್ಷಕ ದೂರವಾಣಿ ಕರೆಮಾಡಿದ ಬೆನ್ನಲ್ಲೇ ಭೇಟಿ ನೀಡಿದ ಶಾಸಕರು ಏಣಿ ಏರಿ ಪರಿಸ್ಥಿತಿ ಅವಲೋಕಿಸಿ ಸ್ಥಳದಲ್ಲೇ ರಿಪೇರಿಗೆ ಸೂಚನೆ ಕೊಟ್ಟ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ನಡೆದಿದೆ.
ಚಂದಕವಾಡಿ ಪಬ್ಲಿಕ್ ಶಾಲೆಯ ಹಲವು ಕೊಠಡಿಗಳು ಶಿಥಿಲಗೊಂಡ ಮಾಹಿತಿ ಅರಿತ ಶಾಸಕ ಪುಟ್ಟರಂಗಶೆಟ್ಟಿ ಇಂದು ಭೇಟಿ ಕೊಟ್ಟು ಶಾಲೆಗಳ ಕೊಠಡಿ ಪರಿಶೀಲನೆ ನಡೆಸಿದರು. ತಾರಸಿ ಹೇಗಿದೆ..? ಎಂಬುದನ್ನು ಅರಿಯುವ ಸಲುವಾಗಿ ಏಣಿಯೊಂದನ್ನು ತರಿಸಿದ ಶಾಸಕರು ಶಾಲೆ ಮೇಲೇರಿ ಎಲ್ಲವನ್ನೂ ಕಂಡು ಅನುದಾನ ಕೊಡುತ್ತೇನೆ, ಶುಕ್ರವಾರದಿಂದಲೇ ಕಾಮಗಾರಿ ಆರಂಭಿಸಿ ಎಂದು ಪಟಾಪಟ್ ಕಾಯಕಲ್ಪ ಕೊಟ್ಟು ಗಮನ ಸೆಳೆದಿದ್ದಾರೆ.
ಶಾಲಾ ಕೊಠಡಿಗಳು ಸೋರುತ್ತಿವೆ ಎಂದು ಶಿಕ್ಷಕರರು ಹತ್ತಾರು ಬಾರಿ ಮನವಿ ಮಾಡಿದರೂ ಅನುದಾನವಿಲ್ಲ ಎನ್ನುವ ಶಾಸಕರ ಮಧ್ಯೆ ಭೇಟಿ ಕೊಟ್ಟ ಕೂಡಲೇ ಕಾಮಗಾರಿ ಆದೇಶ ಕೊಟ್ಟಿದ್ದು ಗಮನಾರ್ಹವಾಗಿದೆ.


























