“ಗೌರವ ಕೊಟ್ಟು ಮಾತನಾಡಿ” ಎಂದ ರೋಗಿಗೆ ಹಿಗ್ಗಾಮುಗ್ಗಾ ಥಳಿಸಿದ ವೈದ್ಯ!
ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (IGMC) ರೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಹಿರಿಯ ವೈದ್ಯರೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಏನಿದು ಘಟನೆ? ಅರ್ಜುನ್ ಪನ್ವಾರ್ (36) ಎಂಬ ರೋಗಿಯು ಉಸಿರಾಟದ ತೊಂದರೆಯಿಂದಾಗಿ ಬ್ರಾಂಕೋಸ್ಕೋಪಿ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಯ ನಂತರ ವೈದ್ಯರ ಸಲಹೆಯಂತೆ ವಾರ್ಡ್‌ನಲ್ಲಿ ವಿಶ್ರಮಿಸುತ್ತಿದ್ದಾಗ, ಶ್ವಾಸಕೋಶದ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ. ರಾಘವ್ ನರುಲಾ ಅವರು ಅಲ್ಲಿಗೆ ಬಂದು ರೋಗಿಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.
ಈ ವೇಳೆ ವೈದ್ಯರು ರೋಗಿಯನ್ನು ‘ನೀನು’ (ಏಕವಚನ) ಎಂದು ಸಂಬೋಧಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜುನ್, “ನೀವು ನಿಮ್ಮ ಮನೆಯವರ ಜೊತೆಯೂ ಹೀಗೆಯೇ ಮಾತನಾಡುತ್ತೀರಾ? ಸ್ವಲ್ಪ ಗೌರವದಿಂದ ಮಾತನಾಡಿ” ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ಡಾ. ರಾಘವ್, ಮಂಚದ ಮೇಲೆ ಮಲಗಿದ್ದ ರೋಗಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ವಿಡಿಯೋ ವೈರಲ್: ವೈದ್ಯರು ರೋಗಿಗೆ ಸತತವಾಗಿ ಗುದ್ದುತ್ತಿರುವ ದೃಶ್ಯವನ್ನು ಅಲ್ಲಿಯೇ ಇದ್ದ ಸಂಬಂಧಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮತ್ತೊಬ್ಬ ವೈದ್ಯರು ಹಲ್ಲೆ ತಡೆಯುವ ಬದಲು ರೋಗಿಯ ಕಾಲುಗಳನ್ನು ಹಿಡಿದುಕೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ತನಿಖೆಗೆ ಆದೇಶಿಸಿದ್ದರು. ಆಸ್ಪತ್ರೆಯ ಆಡಳಿತ ಮಂಡಳಿಯು ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದ್ದು, ಪ್ರಾಥಮಿಕ ವರದಿಯ ಆಧಾರದ ಮೇಲೆ ಡಾ. ರಾಘವ್ ನರುಲಾ ಅವರನ್ನು ಅಮಾನತುಗೊಳಿಸಲಾಗಿದೆ. ಪೊಲೀಸರು ವೈದ್ಯನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























