ಹುಲಿಯ ಹತ್ಯೆ: ಆರೋಪಿಗಳ ಬಂಧನದ ಬೆನ್ನಲ್ಲೇ ಬೆಚ್ಚಿಬೀಳಿಸುವ ವಿಚಾರ ಬಯಲು
ಮೂಡಿಗೆರೆ: ತಾಲ್ಲೂಕಿನ ತತ್ಕೊಳ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿಯೊಂದನ್ನು ಹತ್ಯೆ ಮಾಡಿರುವ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಮೂಡಿಗೆರೆ ತಾಲ್ಲೂಕು ತಳವಾರ ಗ್ರಾಮದ ದೀಕ್ಷಿತ್ (31 ವರ್ಷ) ಮತ್ತು ಕಳಸ ತಾಲ್ಲೂಕು ಮರಸಣಿಗೆ ಗ್ರಾಮದ ಆದಿತ್ಯ (19 ವರ್ಷ) ಬಂಧಿತ ಆರೋಪಿಗಳು.
ಇನ್ನು ಹಲವರು ಹುಲಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದು ಉಳಿದವರ ಬಂಧನಕ್ಕೆ ಅರಣ್ಯ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಅರಣ್ಯ ಇಲಾಖೆ ವಾಚರ್ ಆಗಿರುವ ಕುಂಡ್ರ ಗ್ರಾಮದ ವ್ಯಕ್ತಿಯೊಬ್ಬ ಮುಖ್ಯ ಆರೋಪಿಯಾಗಿದ್ದು, ಆತ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ತತ್ಕೊಳ ಮೀಸಲು ಅರಣ್ಯ ವ್ಯಾಪ್ತಿಯ ಕುಂಡ್ರ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಹುಲಿಯೊಂದನ್ನು ಹತ್ಯೆ ಮಾಡಿ ಅದರ ಬೆಲೆಬಾಳುವ ಅಂಗಾಂಗಗಳನ್ನು ತೆಗೆದು ಹುಲಿಯ ಕಳೆಬರವನ್ನು ಮಣ್ಣಿನಲ್ಲಿ ಹೂತಿಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಬಂಧಿತ ಆರೋಪಿಗಳ ಜೊತೆ ಸ್ಥಳ ಮಹಜರು ನಡೆಸಿದ್ದು, ಪತ್ತೆಯಾದ ಪ್ರಾಣಿಯ ಪಳೆಯುಳಿಕೆಗಳನ್ನು ಸಂಗ್ರಹಿಸಿದ್ದಾರೆ. ಪತ್ತೆಯಾಗಿರುವ ಪಳೆಯುಳಿಕೆಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಭಾಗದಲ್ಲಿ ಸೋಲಾರ್ ಬೇಲಿ ನೋಡಿಕೊಳ್ಳುವ ಕೆಲಸ ಮಾಡುತ್ತಿರುವ ಕುಂಡ್ರ ಗ್ರಾಮದ ಅರಣ್ಯ ಇಲಾಖೆ ಅರೆಕಾಲಿಕ ನೌಕರನ ಮನೆಯ ಸಮೀಪವೇ ಹುಲಿಯ ಕಳೇಬರಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ವನ್ಯಜೀವಿ ಹತ್ಯೆ ಕಾಯ್ದೆಯಡಿ ಮೂಡಿಗೆರೆ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಅರಣ್ಯ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣದ ಬಗ್ಗೆ ಗಂಭೀರ ತನಿಖೆ ಕೈಗೊಂಡು ತಪ್ಪಿತಸ್ತರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬೈಕಿನಲ್ಲಿ ಹುಲಿ ಅಂಗಾಂಗ ಇಟ್ಟು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದರೆ ?:
ಈಗ್ಗೆ ಎರಡು ತಿಂಗಳ ಹಿಂದೆ ಚಿಕ್ಕಮಗಳೂರು ನಗರದಲ್ಲಿ ಬೈಕಿಗೆ ಸಿಕ್ಕಿಸಿದ್ದ ಬ್ಯಾಗಿನಲ್ಲಿ ಹುಲಿ ಅಂಗಾಂಗ ಪತ್ತೆಯಾಗಿದ್ದ ಪ್ರಕರಣದಲ್ಲಿ ಬೈರಿಗದ್ದೆ ಗ್ರಾಮದ ಸತೀಶ್ ಎಂಬುವವರನ್ನು ಬಂಧಿಸಲಾಗಿತ್ತು. ಚಿಕ್ಕಮಗಳೂರು ನ್ಯಾಯಾಲಯಕ್ಕೆ ಬೈಕಿನಲ್ಲಿ ಹೋಗಿದ್ದ ಸತೀಶ್ ವಾಪಾಸ್ಸು ಬರುವಾಗ ಖಚಿತ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ತಪಾಸಣೆ ನಡೆಸಿದಾಗ ಬೈಕಿಗೆ ಸಿಕ್ಕಿಸಿದ್ದ ಬ್ಯಾಗ್ ನಲ್ಲಿ ಹುಲಿ ತಲೆಬುರುಡೆ, ಉಗುರು ಮತ್ತು ಹಲ್ಲುಗಳು ಪತ್ತೆಯಾಗಿದ್ದವು.
ಬಲ್ಲ ಮೂಲಗಳ ಪ್ರಕಾರ ಹುಲಿ ಹತ್ಯೆಯಲ್ಲಿ ಮುಖ್ಯ ಆರೋಪಿಯಾಗಿರುವ ಫಾರೆಸ್ಟ್ ವಾಚರ್ ತನ್ನ ಸಹಚರರನ್ನು ಬಳಸಿ ವೈಯುಕ್ತಿಕ ದ್ವೇಷಕ್ಕಾಗಿ ಸತೀಶ್ ಅವರ ಬೈಕಿನಲ್ಲಿ ಹುಲಿ ಅಂಗಾಂಗಗಳನ್ನು ಇರಿಸಿ ಸತೀಶ್ ವಿರುದ್ಧ ಪ್ರಕರಣ ದಾಖಲು ಆಗುವಂತೆ ಸಂಚು ಮಾಡಿದ್ದ ಎಂದು ಬಂಧಿತ ಆರೋಪಿಗಳು ಬಾಯಿಬಿಟ್ಟಿದ್ದಾರೆಂದು ತಿಳಿದುಬಂದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

























