ಘೋರ ಕೃತ್ಯ: ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿ ಪತಿ!

police
01/01/2026

ಹೊಸಪೇಟೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ 76 ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ: ಮೃತ ಮಹಿಳೆಯನ್ನು ಝಾನ್ಸಿ (32) ಎಂದು ಗುರುತಿಸಲಾಗಿದೆ. ಹದಿಮೂರು ವರ್ಷಗಳ ಹಿಂದೆ ಸೆಲ್ವಕುಮಾರ್ ಮತ್ತು ಝಾನ್ಸಿ ಅವರ ವಿವಾಹವಾಗಿತ್ತು. ಆರಂಭದ ಏಳು ವರ್ಷಗಳ ಕಾಲ ದಂಪತಿ ಅನ್ಯೋನ್ಯವಾಗಿದ್ದರು. ಆದರೆ, ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗದ ಕಾರಣ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಇದರ ಜೊತೆಗೆ ಪತ್ನಿಯ ಮೇಲೆ ಸೆಲ್ವಕುಮಾರ್ ಅತಿಯಾದ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಪತಿಯ ಕಿರುಕುಳ ತಾಳಲಾರದೆ ಝಾನ್ಸಿ ತನ್ನ ತವರು ಮನೆಗೆ ಬಂದು ನೆಲೆಸಿದ್ದರು. ಮೂರು ದಿನಗಳ ಹಿಂದಷ್ಟೇ ಸೆಲ್ವಕುಮಾರ್ ವೆಂಕಟಾಪುರಕ್ಕೆ ಬಂದು ಪತ್ನಿಯನ್ನ ಮನೆಗೆ ಬರುವಂತೆ ಕರೆದಿದ್ದನು. ಆದರೆ ಝಾನ್ಸಿ ಬರಲು ನಿರಾಕರಿಸಿದ್ದಳು.

ಇಂದು ಪುನಃ ಮನೆಗೆ ಬರುವಂತೆ ಪೀಡಿಸಿದಾಗ ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಆಕ್ರೋಶಗೊಂಡ ಸೆಲ್ವಕುಮಾರ್ ತನ್ನಲ್ಲಿದ್ದ ಕೊಡಲಿಯಿಂದ ಝಾನ್ಸಿಯ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ಬಲವಾಗಿ ಏಟು ನೀಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಝಾನ್ಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆರೋಪಿ ಬಂಧನ: ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಸೆಲ್ವಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಗಳ ಸಾವಿನಿಂದ ಕಂಗಾಲಾಗಿರುವ ಕುಟುಂಬಸ್ಥರು, “ನಮ್ಮ ಮಗಳಿಗೆ ನ್ಯಾಯ ಸಿಗಬೇಕು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿದ್ದಾರೆ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version