9:39 AM Wednesday 28 - January 2026

“ನೀನು ಯಾಕಪ್ಪ ಆದಾಯದ ಮಿತಿ 25 ಲಕ್ಷಕ್ಕೆ ಏರಿಕೆ ಮಾಡಿದೆ?” | ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿಯೇ ಗುಡುಗಿದ ಕುಮಾರಸ್ವಾಮಿ

12/12/2020

ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಏಕವಚನದಲ್ಲಿಯೇ ತೀವ್ರ ವಾಗ್ದಾಳಿ ನಡೆಸಿದ ಘಟನೆ ನಡೆದಿದ್ದು, ಪದೇ ಪದೇ ನನ್ನ ಬಗ್ಗೆ ಮಾತನಾಡಿ ಮುಖಭಂಗ ಅನುಭವಿಸಬೇಡಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನೀನು ಯಾಕಪ್ಪ ಆದಾಯದ ಮಿತಿ 25 ಲಕ್ಷಕ್ಕೆ ಏರಿಕೆ ಮಾಡಿದೆ?” ಎಂದು ಸಿದ್ದರಾಮಯ್ಯರನ್ನು ಏಕವಚನದಲ್ಲಿ ಪ್ರಶ್ನಿಸಿದ ಕುಮಾರಸ್ವಾಮಿ, ದೇವೇಗೌಡರು ಕೃಷಿ ಮಾಡಿದ್ದಾರೆ, ಸೆಗಣಿ ಬಾಚಿದ್ದಾರೆ, ಹೇಮಾವತಿ ನದಿ ಈಜಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ನಿನಗೆ ಏನು ಗೊತ್ತು ದೇವಗೌಡರ ಇತಿಹಾಸ ಎಂದು ಸಿದ್ದರಾಮಯ್ಯ ವಿರುದ್ಧ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಾನು ಬೇನಾಮಿ ವ್ಯವಹಾರ ಮಾಡಿದ್ರೆ, ನೀವು ಸಾಬೀತು ಮಾಡಿ. ನೀವು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ. ನಾನು ನಿಮಗಿಂತ ದೊಡ್ಡ ಧ್ವನಿಯಲ್ಲಿ ಮಾತನಾಡಬಲ್ಲೆ. ನೀವು ಸಿಎಂ ಆಗಿದ್ದಾಗ ಲೀ ಮೆರಿಡಿಯನ್ ಹೋಟೆಲ್​ನಲ್ಲಿ ಶುಗರ್ ಫ್ಯಾಕ್ಟರಿ ಕ್ಲಬ್ ನಡೆಸುತ್ತಿದ್ದವರು ಯಾರು? ನಿನ್ನ ಹಾಗೆ ನಾನು ಮಾಡಿಲ್ಲ ಸಿದ್ದರಾಮಯ್ಯ. ಅಪ್ಪನಿಂದ ಮಕ್ಕಳವರೆಗೆ ಕಣ್ಣೀರು ಹಾಕುವುದು ಸಂಸ್ಕೃತಿ ಅಂತಾರೆ. ನೀನು ಡಿಸಿಎಂ ಆದನಂತರ ಸೋತ ನಂತರ ಬಂದು ದೇವೇಗೌಡರ ಮುಂದೆ ಕಣ್ಣೀರು ಹಾಕಿದ್ದೆ ಎಂದು ಅವರು ಗುಡುಗಿದರು.

ಬಿಜೆಪಿ ಬಗ್ಗೆ ನಮಗೆ ಸಾಫ್ಟ್ ಕಾರ್ನರ್ ಇಲ್ಲ. ಯಾರಿಗೂ ಗುಲಾಮತನಕ್ಕೆ ಪಕ್ಷವನ್ನ ಒಳಪಡಿಸಿಲ್ಲ. ವಿರೋಧ ಪಕ್ಷದಲ್ಲಿದ್ದ ಕಾರಣ ಕೇವಲ ವಿರೋಧಕ್ಕೆ ಅಲ್ಲ. ನಾಡಿನ ಬೆಳವಣಿಗೆ ಸಹಕಾರ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಸಿದ್ದರಾಮಯ್ಯ ಪದೇ ಪದೇ ನನ್ನ ಬಗ್ಗೆ ಮಾತನಾಡಿ ಮುಖಭಂಗ ಮಾಡಿಕೊಳ್ಳಬೇಡಿ ಎಂದು ಅವರು ಗುಡುಗಿದರು.

ಇತ್ತೀಚಿನ ಸುದ್ದಿ

Exit mobile version