9:46 AM Wednesday 20 - August 2025

ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ತೊಡೋಣ: ಯಾಸರ್ ಅಘಾತ್ ಕೌಸರಿ ಅಭಿಮತ

skssf
27/01/2023

ಕೊಟ್ಟಿಗೆಹಾರ: ಜಾತಿ, ಧರ್ಮ,ಭಾಷೆ, ವೇಷ ವಿಧಾನಗಳ ಭೇದವಿಲ್ಲದೇ ಎಲ್ಲರೂ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ತೊಡೋಣ ಎಂದು  ಸುಳ್ಯ ಪಾಜಪಳ್ಳದ ಜುಮ್ಮಾ ಮಸೀದಿಯ ಇಮಾಮರಾದ ಯಾಸರ್ ಅಘಾತ್ ಕೌಸರಿ ಹೇಳಿದರು.

ಚಿಕ್ಕಮಗಳೂರು ಜಿಲ್ಲಾ SKSSF  ವತಿಯಿಂದ ಗುರುವಾರ ಸಂಜೆ ಚಕ್ಕಮಕ್ಕಿಯಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪ್ರಭಾಷಣ ನೀಡಿ  ಅವರು ಮಾತನಾಡಿದರು.

ವಿವಿಧ ಧರ್ಮಗಳ ವಿಶ್ವಾಸ, ಆಚಾರ, ಸಂಸ್ಕೃತಿ, ವಿಚಾರ, ಹಬ್ಬ ಎಲ್ಲವೂ ಬೇರೆ ಬೇರೆ ಆಗಿದ್ದರೂ ಕೂಡ ಮನುಷ್ಯತ್ವದಲ್ಲಿ ನಾವೆಲ್ಲರೂ ಸಮಾನರು. ಮನುಷ್ಯ ಶರೀರದಲ್ಲಿ ಹರಿದಾಡುವ ರಕ್ತದ ಬಣ್ಣದಲ್ಲಿ ವ್ಯತ್ಯಾಸ ಇರುವುದಿಲ್ಲ. ರಸ್ತೆಯಲ್ಲಿ ಅಪಘಾತ ನಡೆದರೆ  ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವ ಬದಲು ಅಪಘಾತವಾದವರು ಬೇರೆ ಬೇರೆ ಕೋಮಿಗೆ ಸೇರಿದವರಾಗಿದ್ದರೆ ಆಯಾ ಕೋಮಿನವವರು ಆಯಾ ಗುಂಪಿಗೆ ಸೇರಿಕೊಂಡು ಕೋಮು ವಿಚಾರವಾಗಿ ಘಟನೆಯಾಗಿ ಮಾರ್ಪಡ್ತಾ ಇದೆ. ಈ ರೀತಿ ಆಗಲು ಅವಕಾಶ ಕೊಡಬಾರದು ಎಂದರು.

ಚಿಕ್ಕಮಗಳೂರಿನ ವಿಶ್ವಧರ್ಮಪೀಠ ಜಯಬಸವ ತಪೋವನದ  ಡಾ.ಜಯ ಬಸವಾನಂದ ಸ್ವಾಮೀಜಿ ಮಾತನಾಡಿ, ಜಾತಿ ಮತ್ತು ರಾಜಕಾರಣದಿಂದ ಜನರನ್ನು ಬೇರ್ಪಡಿಸುವಂತಹ ಕಾರ್ಯಗಳು ಈಗ ಎಲ್ಲೆಡೆ ನಡೆಯುತ್ತಿದೆ. ಸಣ್ಣಸಣ್ಣ ವಿಚಾರಗಳಿಗೆ ಕೋಮುಬಣ್ಣವನ್ನು ಬಳಿದು ಸಮಾಜದ ಸ್ವಾಸ್ಥö್ಯವನ್ನು ಕೆಡಿಸುವಂತಹ ಘಟನೆಗಳು ಹೆಚ್ಚಾಗಿವೆ. ಸಹೋದರತ್ವದ ಭಾವದಿಂದ ಬದುಕಿದಾಗ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ. ಹೃದಯದ ಕಣ್ಣಿನಿಂದ ಎಲ್ಲರನ್ನೂ ಕಾಣುವ ಮೂಲಕ ಸೌಹಾರ್ದತೆಯ ನಾಡನ್ನು ಕಟ್ಟಬೇಕಿದೆ ಎಂದರು.

ಹಿರೇಬೈಲ್ ಸೆಂಟ್ ಜೋಸೇಫ್ ಚರ್ಚ್ನ ಫರ್ನಾಂಡೀಸ್ ಡೇವಿಡ್ ಪ್ರಕಾಶ್ ಮಾತನಾಡಿ, ಪ್ರಜ್ಞಾವಂತ, ನಾಗರಿಕ, ಸುಶಿಕ್ಷಿತ ಸಮಾಜದ ನಾಗರೀಕರಾದ ನಾವು ಸೌಹಾರ್ದತೆಯ ಮಾರ್ಗದಲ್ಲಿ ದೇಶವನ್ನು ಕಟ್ಟಲು ಪಣತೊಡಬೇಕಾಗಿದೆ. ಸ್ನೇಹ ಸೌರ್ಹಾದತೆನ್ನು ಕಲಕುವ ಅಪಪ್ರಚಾರಗಳು ನಿಲ್ಲಲಿ.ಸತ್ಯದ, ಸೌಹಾರ್ದತೆಯ ಶಾಂತಿಯ ಹಾದಿಯಲ್ಲಿ ಮುನ್ನಡೆಯೋಣ ಎಂದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಬಣಕಲ್‌ ನಿಂದ ಚಕ್ಕಮಕ್ಕಿ ಮಸೀದಿಯವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ಎಸ್‌ ಕೆಎಸ್ ‌ಎಸ್ ‌ಎಫ್ ಜಿಲ್ಲಾ ಅಧ್ಯಕ್ಷರಾದ ಇಬ್ರಾಹೀಂ ಶಾಲಿಮಾರ್, ಸಂಚಾಲಕರಾದ ಎ.ಸಿ.ಅಯ್ಯೂಬ್, ತಾಲ್ಲೂಕು ಅಧ್ಯಕ್ಷರಾದ ಜಮಾಲುದ್ದೀನ್ ಫೈಜಿ, ಬಣಕಲ್ ಘಟಕ ಅಧ್ಯಕ್ಷರಾದ ಅರಫತ್,  ಎಸ್‌ ವೈಎಸ್ ಜಿಲ್ಲಾ ಅಧ್ಯಕ್ಷರಾದ ಸಿ.ಕೆ. ಇಬ್ರಾಹೀಂ,  ಚಕ್ಕಮಕ್ಕಿ ಮಸೀದಿಯ ಅಧ್ಯಕ್ಷರಾದ ಇಬ್ರಾಹೀಂ ಹಾಜಿ, ಮದರಸ ಅಧ್ಯಕ್ಷರಾದ ನಜೀರ್ ಹಾಜಿ ಗಬ್ಗಲ್, ಪ್ರಾಂಶುಪಾಲರಾದ ಸಿನಾನ್ ಫೈಜಿ, ಬ್ಯಾರಿ ಒಕ್ಕೂಟದ ಅಧ್ಯಕ್ಷರಾದ ಬಿ.ಎಚ್. ಮೊಹಮ್ಮದ್, ಬಣಕಲ್ ಠಾಣಾ ಎಎಸ್‌ಐ ಶಶಿ, ಅಕ್ರಂ ಹಾಜಿ, ಅಲೀ ಹಾಜಿ,  ನಾಸೀರ್, ಹಂಜಾ, ಅಲೀಹಾಜಿ, ರಿಯಾಜ್, ಜಾಬಿರ್, ಯಾಸೀರ್, ಗೌಸ್ ಮುನೀರ್, ಉಮರ್ ಹಾಜಿ, ಸಿರಾಜ್, ಹಕ್ಕಿಂ, ಅಜೀಜ್ ಮುಂತಾದವರು ಇದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version