6:10 PM Wednesday 20 - August 2025

ಸೇಡು: ಅಮಾಯಕ ತಂದೆಯನ್ನು ಹತ್ಯೆ ಮಾಡಿದವನನ್ನು ನಡು ರಸ್ತೆಯಲ್ಲಿ ಕೊಚ್ಚಿಕೊಂದ ಪುತ್ರ!

hasana
27/11/2024

ಹಾಸನ: ತಂದೆಯನ್ನು ಹತ್ಯೆ ಮಾಡಿದ್ದ ವ್ಯಕ್ತಿಯನ್ನು ಪುತ್ರ ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದಡದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ನಡೆದಿದೆ.

ನಿರ್ವಾಣಪ್ಪ ಹತ್ಯೆಗೀಡಾದ ವೃದ್ಧನಾಗಿದ್ದಾನೆ. ದಡದಹಳ್ಳಿ ಗ್ರಾಮದ ಮೂರ್ತಿ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ.

ಘಟನೆ ಹಿನ್ನೆಲೆ:

ನಿರ್ವಾಣಪ್ಪ 2011 ರಲ್ಲಿ ತನ್ನ ಸಹೋದರನ ಮೇಲೆ ಕೊಲೆ ಆರೋಪ ಹೊರಿಸಲು ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ಲಕ್ಕಪ್ಪ ಎಂಬಾತನನ್ನು ಕೊಲೆ ಮಾಡಿ, ನಂತರ ಸಹೋದರನ ಮನೆಯ ಕಾಂಪೌಂಡ್ ಒಳಗೆ ಮೃತದೇಹ ಎಸೆದಿದ್ದ. ಪೊಲೀಸರ ತನಿಖೆಯಲ್ಲಿ ಆತನ ನಾಟಕ ಬಯಲಾಗಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಕೆಲವು ತಿಂಗಳ ಹಿಂದೆಯಷ್ಟೇ ಆತ ಜೈಲಿನಿಂದ ಬಿಡುಗಡೆಯಾಗಿದ್ದ.

ಜೈಲಿನಿಂದ ಬಿಡುಗಡೆಯಾದರೂ ನಿರ್ವಾಣಪ್ಪ ತಾನು ಹತ್ಯೆ ಮಾಡಿದ್ದ ಲಕ್ಕಪ್ಪನ ಮಕ್ಕಳಿಗೆ ಹೆದರಿ ಗ್ರಾಮಕ್ಕೆ ಬಾರದೇ ಸಮೀಪದ ಮಲ್ಲಿಪಟ್ಟಣ ಗ್ರಾಮದಲ್ಲಿ ವಾಸವಿದ್ದ.

ಮರಣ ಪತ್ರ ಪಡೆಯಲು ಬಂದ ನಿರ್ವಾಣಪ್ಪ:

ನಿನ್ನೆ ಮಧ್ಯಾಹ್ನ ತನ್ನ ತಂದೆಯ ಮರಣ ಪ್ರಮಾಣ ಪತ್ರ ಪಡೆಯಲು ದಡದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದ ನಿರ್ವಾಣಪ್ಪ ಅನಿವಾರ್ಯವಾಗಿ ಬಂದಿದ್ದ. ಇದೇ ವೇಳೆ ನಿರ್ವಾಣಪ್ಪನಿಗೆ ಏಕಾಏಕಿ ಲಕ್ಕಪ್ಪನ ಮಗ ಮೂರ್ತಿ ಎದುರಾಗಿದ್ದ. 13 ವರ್ಷಗಳ ಹಿಂದೆ ತನ್ನ ತಂದೆಯನ್ನು ಕೊಲೆ ಮಾಡಿದ್ದಕ್ಕಾಗಿ ಹಾಡಹಗಲೇ ಗ್ರಾಮದ ನಡುರಸ್ತೆಯಲ್ಲೇ ನಿರ್ವಾಣಪ್ಪನನ್ನು ಮೂರ್ತಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ, ಸೇಡು ತೀರಿಸಿಕೊಂಡಿದ್ದಾನೆ.

ನಡುರಸ್ತೆಯಲ್ಲಿ ವೃದ್ಧನ ಬರ್ಬರ ಹತ್ಯೆಯನ್ನು ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಿಪಿಐ ಕೆ.ಎಂ.ವಸಂತ್ ನೇತೃತ್ವದ ತಂಡ ಆಗಮಿಸಿದ್ದು, ಆರೋಪಿ ಮೂರ್ತಿಯನ್ನು ಪತ್ತೆ ಹಚ್ಚಿ ಬಂಧಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ

Exit mobile version