ಇಂಡಿಗೋ ವಿಮಾನದಲ್ಲಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ: ಶೌಚಾಲಯದಲ್ಲಿ ಬೀಗ ಜಡಿದು ಬಂಧನ

01/10/2023

ಇಂಡಿಗೊ ಅಹಮದಾಬಾದ್-ಪಾಟ್ನಾ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ ಆರೋಪದಡಿಯಲ್ಲಿ 27 ವರ್ಷದ ಯುವಕನನ್ನು ಬಂಧಿಸಲಾಗಿದೆ. ಇಂಡಿಗೋ ವಿಮಾನ 6ಇ 126ರಲ್ಲಿ ಈ ಘಟನೆ ನಡೆದಿದೆ. ಬಂಧಿತ ವ್ಯಕ್ತಿಯನ್ನು ಮೊಹಮ್ಮದ್ ಕಮರ್ ರಿಯಾಜ್ ಎಂದು ಗುರುತಿಸಲಾಗಿದೆ. ವಿಮಾನ ನಿಂತ ಕೂಡಲೇ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.

ಈ ಕುರಿತು ಪಾಟ್ನಾ ವಿಮಾನ ನಿಲ್ದಾಣದ ಎಸ್ಎಚ್ಒ ವಿನೋದ್ ಪೀಟರ್ ಸುದ್ದಿ ಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದರು. “ವಿಮಾನದಲ್ಲಿ ಗಲಾಟೆ ಮತ್ತು ಅಶಿಸ್ತಿನ ಮತ್ತು ಅನುಚಿತ ವರ್ತನೆಗಾಗಿ ವಿಮಾನಯಾನ ಸಂಸ್ಥೆಗಳು ವ್ಯಕ್ತಿಯ ವಿರುದ್ಧ ದೂರು ದಾಖಲಿಸಿವೆ” ಎಂದು ಹೇಳಿದರು.

ಪ್ರಾಥಮಿಕ ತನಿಖೆ ವೇಳೆ ಆತನ ವೈದ್ಯಕೀಯ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಮತ್ತು ಅವರೊಂದಿಗೆ ಪ್ರಯಾಣಿಸುತ್ತಿದ್ದ ಅವರ ಸಹೋದರನ ಹೇಳಿಕೆಯ ಪ್ರಕಾರ ಬಂಧಿತ ವ್ಯಕ್ತಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ಗೊತ್ತಾಗಿದೆ ಎಂದು ಎಸ್ಎಚ್ಒ ಹೇಳಿದರು.

ರಿಯಾಜ್ ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್. ಅವರು ಬಿಹಾರದ ಪಶ್ಚಿಮ ಚಂಪಾರಣ್ ನಿವಾಸಿಯಾಗಿದ್ದು, ಅವರ ಹಿರಿಯ ಸಹೋದರ ಅಹಮದಾಬಾದ್ ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಂದ ಅವರು ಚಿಕಿತ್ಸೆಗಾಗಿ ಪಾಟ್ನಾಕ್ಕೆ ತಮ್ಮ ಸಹೋದರನೊಂದಿಗೆ ವಿಮಾನ ಹತ್ತಿದರು. ಸದ್ಯ ರಿಯಾಜ್ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಅವರ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಾರೆ ಎಂದು ಎಸ್ಎಚ್ಒ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version