ಪ್ರಜ್ವಲ್ ಬಳಿಕ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ಕಿರುಕುಳ ಆರೋಪ!

ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ಹಗರಣದ ಆರೋಪ ಕೇಳಿ ಬಂದಿದ್ದು, ಸೂರಜ್ ರೇವಣ್ಣ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ದೌರ್ಜನ್ಯ ಎಸಗಿದ್ದಾರೆ ಎಂದು ಅರಕಲಗೂಡಿನ ಚೇತನ್ ಎಂಬಾತ ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಸುಮಾರು 14ರಿಂದ 15 ಪುಟದ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.
ಈ ಆರೋಪದ ಬೆನ್ನಲ್ಲೇ ದೂರುದಾರ ಚೇತನ್ ವಿರುದ್ಧ ಬ್ಲಾಕ್ ಮೇಲ್ ಆರೋಪ ಹೊರಿಸಿ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಹಾಗೂ ಸೂರಜ್ ಬ್ರಿಗೇಡ್ ನ ಖಜಾಂಚಿ ಶಿವಕುಮಾರ್ ಎಚ್.ಎಲ್. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ನೀಡಿದ್ದಾರೆ.
ತನ್ನ ಮೇಲೆ ಎಂಎಲ್ ಸಿ ಸೂರಜ್ ರೇವಣ್ಣ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಚೇತನ್ ಎಂಬ ಯುವಕ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.
ಸೂರಜ್ ರೇವಣ್ಣ ವಿರುದ್ಧ ದೂರು ನೀಡಿರುವ ಚೇತನ್ ವಿರುದ್ಧ ಹೊಳೆನರಸೀಪುರ ಪಟ್ಟಣ ಠಾಣೆಯಲ್ಲಿ ಸೂರಜ್ ರೇವಣ್ಣ ಆಪ್ತ ಕಾರ್ಯದರ್ಶಿ ಶಿವಕುಮಾರ್ ದೂರು ನೀಡಿ, ಚೇತನ್ 5 ಕೋಟಿ ರೂಪಾಯಿ ಹಣಕ್ಕಾಗಿ ಬೇಡಿಕೆ ಇರಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಈ ದೂರಿನ ಅನ್ವಯ ಚೇತನ್ ವಿರುದ್ಧ ಐಪಿಸಿ ಸೆಕ್ಷನ್ 384, 506 ಕಲಂ ಪ್ರಕರಣ ದಾಖಲಾಗಿದೆ ತಿಳಿದು ಬಂದಿದೆ.
ಜೂನ್ 16ರಂದು ಸೂರಜ್ ರೇವಣ್ಣ ಹೊಳೆನರಸೀಪುರದ ಗನ್ನಿಕಡ ತೋಟದ ಮನೆಗೆ ಯುವಕನನ್ನು ಆಹ್ವಾನಿಸಿದ್ದರು. ಅಲ್ಲಿ ತೆರಳಿದ ವೇಳೆ ಕೊಠಡಿಯೊಂದಕ್ಕೆ ಕರೆದೊಯ್ದು ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದು, ದೈಹಿಕವಾಗಿ ಗಾಯಗೊಳಿಸಿದ್ದಾರೆ ಎಂದು ಚೇತನ್ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಸೂರಜ್ ಆಪ್ತ ಶಿವಕುಮಾರ್ ಎಂಬಾತ ಚೇತನ್ ವಿರುದ್ಧ ಪ್ರತಿದೂರು ನೀಡಿದ್ದಾರೆ. ಸೂರಜ್ ಬಳಿ ಕೆಲಸ ಕೊಡಿಸುವಂತೆ ಚೇತನ್ ತನ್ನ ಬಳಿ ಕೇಳಿದ್ದ. ಜೂನ್ 16 ರಂದು ಗನ್ನಿಕಡದ ತೋಟದ ಮನೆಗೆ ಕೆಲಸ ಕೇಳಲು ಹೋಗಿದ್ದ, ಕೆಲಸ ಕೇಳಿ ವಾಪಸ್ಸು ಬಂದ ಬಳಿಕ ಕೆಲಸ ಕೊಟ್ಟಿಲ್ಲ ಎನ್ನುವ ಕಾರಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97