ಹಳೆ ದ್ವೇಷ: ಒಂದೇ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು

04/09/2023

ಹಳೇ ದ್ವೇಷಕ್ಕೆ ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಅದೇ ಊರಿನ ಮೂವರು ವ್ಯಕ್ತಿಗಳು ಹಳೆಯ ದ್ವೇಷದ ಕಾರಣದಿಂದ ಕೊಚ್ಚಿ ಕೊಂದ ಘಟನೆ ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಪಲ್ಲಡಂನಲ್ಲಿ‌ ನಡೆದಿದೆ.

ಮೃತರನ್ನು ಸೆಂಥಿಲ್ ಕುಮಾರ್, ಅವರ ತಾಯಿ ಪುಷ್ಪಾವತಿ, ಸೋದರಸಂಬಂಧಿ ಮೋಹನ್ ಮತ್ತು ಇನ್ನೊಬ್ಬ ಸಂಬಂಧಿ ರತ್ನಾಂಬಳ್ ಎಂದು ಗುರುತಿಸಲಾಗಿದೆ.

ಈ ಅಪರಾಧಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಇತ್ತ ಎಲ್ಲಾ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವವರೆಗೂ ಮೃತರ ಸಂಬಂಧಿಕರು ಮತ್ತು ಸ್ನೇಹಿತರು ಆ ಮೃತದೇಹಗಳನ್ನು ಸ್ವೀಕರಿಸುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಅವರು ಪಲ್ಲಡಂನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಮಾಧಾನಪಡಿಸಿದ್ದಾರೆ.

ಪಲ್ಲಡಂನ ಕಲ್ಲಕಿನಾರುನಲ್ಲಿರುವ ಸೆಂಥಿಲ್ ಕುಮಾರ್ ಅವರ ಅಂಗಡಿಯ ಸಮೀಪ ಇರುವ ಮನೆಯ ಬಳಿ ಅವರೆಲ್ಲರ ಮೃತದೇಹಗಳು ಪತ್ತೆಯಾಗಿವೆ. ಆ ಶವಗಳ ಮೇಲೆ ಮಚ್ಚಿನಿಂದ ಕೊಚ್ಚಿದ ಹಲವಾರು ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಲ್ಲಡಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸೆಂಥಿಲ್ ಕುಮಾರ್ ಅವರ ಚಾಲಕನಾಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಎಂಬಾತ ಸೆಂಥಿಲ್ ಕುಮಾರ್ ಅವರ ಅಂಗಡಿಯ ಬಳಿ ಬಂದು ಜಗಳವಾಡಿದ್ದ. ಆಗ ಆತನಿಗೆ ಇನ್ನಿಬ್ಬರು ಸ್ನೇಹಿತರು ಸಾಥ್ ನೀಡಿದ್ದರು.

 

ಈ ವೇಳೆ ಸೆಂಥಿಲ್ ಸಹಾಯಕ್ಕಾಗಿ ಜೋರಾಗಿ ಕೂಗಿದ್ದಾರೆ. ಆಗ ಅವರ ಕೂಗನ್ನು ಕೇಳಿ, ಅವರ ಸೋದರಸಂಬಂಧಿ, ತಾಯಿ ಮತ್ತು ಇನ್ನೊಬ್ಬ ಸಂಬಂಧಿ ಅವರನ್ನು ರಕ್ಷಿಸಲು ಧಾವಿಸಿದರು. ಆಗ ಆರೋಪಿಗಳು ಅವರೆಲ್ಲರನ್ನೂ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version