ತಮಿಳುನಾಡಿನ ರಾಜಕೀಯ ನಿರ್ಧಾರ ದೆಹಲಿಯಲ್ಲಿ ತೀರ್ಮಾನಿಸಲು ಸಾಧ್ಯವಿಲ್ಲ: ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಕೆ. ಅಣ್ಣಾಮಲೈ ಹೇಳಿಕೆ

k annamalai.jpg
30/06/2026

ಚೆನ್ನೈ: “ಬಿಜೆಪಿ ಸೇರಿದಂತೆ ಯಾವುದೇ ರಾಷ್ಟ್ರೀಯ ಪಕ್ಷಗಳು ತಮಿಳುನಾಡಿನ ಸ್ಥಳೀಯರ ನಾಡಿಮಿಡಿತ ಹಾಗೂ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ,” ಎಂದು ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ನೇರ ವಿಮರ್ಶೆ ಮಾಡಿದ್ದಾರೆ.

ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ, ರಾಜಕೀಯದಲ್ಲಿ ಹೊಸ ಮನ್ವಂತರ ಹಾಗೂ ಯುವ ನಾಯಕತ್ವ ತರುವ ಉದ್ದೇಶದಿಂದ ಅಣ್ಣಾಮಲೈ ‘ವಿ, ದಿ ಲೀಡರ್ಸ್’ (We, The Leaders – WTL) ಎಂಬ ಹೊಸ ಆಂದೋಲನವನ್ನು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಅವರು ತಮ್ಮ ನಿರ್ಧಾರ ಹಾಗೂ ತಮಿಳುನಾಡು ರಾಜಕೀಯದ ಸ್ಥಿತಿಗತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

“ತಮಿಳುನಾಡಿನ ರಾಜಕೀಯ ನಿರ್ಧಾರಗಳು ಇಲ್ಲಿಯೇ ಆಗಬೇಕೇ ಹೊರತು ದೆಹಲಿಯಿಂದ ನಿರ್ದೇಶಿಸಲ್ಪಡಬಾರದು. ಬಿಜೆಪಿಯಲ್ಲಿದ್ದಾಗ ನನಗೆ ತಮಿಳುನಾಡಿನ ನಾಯಕತ್ವದ ಹಾದಿ ಹಲವರಿಗೆ ಮುಚ್ಚಿಹೋಗಿದೆ ಎನಿಸಿತು. ತಮಿಳು ಜನತೆಗೆ ತಮ್ಮ ನಿರ್ಧಾರಗಳನ್ನು ದೆಹಲಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ ಎಂಬ ಭಾವನೆಯಿದೆ, ಇದು ಒಳ್ಳೆಯ ರಾಜಕೀಯ ಅಲ್ಲ,” ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮುಂದೆಯೂ ನಾಗರಿಕ ಸಂಬಂಧ ಇರಲಿದೆಯೇ ಹೊರತು ಅತಿಯಾದ ಸ್ನೇಹ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಮಗೆ ಪಕ್ಷದ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಆದರೆ ಕೇವಲ ಸದ್ಧಾಂತಿಕ ಭಿನ್ನಾಭಿಪ್ರಾಯ (Vision Mismatch) ಇತ್ತೆಂದು ಹೇಳಿದ್ದಾರೆ.
ಇತ್ತೀಚಿನ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ‘ಟಿವಿಕೆ’ (TVK) ಪಕ್ಷದ ಪ್ರಚಂಡ ಗೆಲುವನ್ನು ಅಣ್ಣಾಮಲೈ ಮುಕ್ತವಾಗಿ ಶ್ಲಾಘಿಸಿದ್ದಾರೆ. “ಹಣದ ಬಲ ಮತ್ತು ಜಾತಿ ರಾಜಕೀಯದ ಸಾಂಪ್ರದಾಯಿಕ ಚೌಕಟ್ಟನ್ನು ಮುರಿಯಲು ಕೆಲವೊಮ್ಮೆ ಇಂತಹ ಸಿನಿಮಾ ತಾರೆಗಳ ಅಲೆಯ ಅಗತ್ಯವಿರುತ್ತದೆ. ತಮಿಳುನಾಡಿನ ಮತದಾರರ ಜನಸಂಖ್ಯಾ ವಿನ್ಯಾಸ (Demographics) ಈಗ ಸಂಪೂರ್ಣ ಬದಲಾಗಿದೆ,” ಎಂದಿದ್ದಾರೆ.

ಸದ್ಯಕ್ಕೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಮ್ಮ ಸಂಘಟನೆಯಲ್ಲಿ ಈಗಾಗಲೇ 19 ಲಕ್ಷ ಸದಸ್ಯರಿದ್ದು, ಇದನ್ನು 50 ಲಕ್ಷಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದಾರೆ. ಈ ಆಂದೋಲನವು ಯುವ ನಾಯಕರಿಗೆ ‘ಅಬ್ದುಲ್ ಕಲಾಂ ಫೆಲೋಶಿಪ್’ ನೀಡಿ, ಹಣಕಾಸಿನ ಸ್ವಾತಂತ್ರ್ಯದೊಂದಿಗೆ ತಳಮಟ್ಟದಲ್ಲಿ ಸೇವೆ ಮಾಡಲು ಸಿದ್ಧಗೊಳಿಸಲಿದೆ ಎಂದು ತಿಳಿಸಿದ್ದಾರೆ.

“ನಾನು ಯಾವಾಗಲೂ ಮೊದಲು ಭಾರತೀಯ, ನಂತರ ಹೆಮ್ಮೆಯ ತಮಿಳಿಗ. ಪ್ರಜಾಪ್ರಭುತ್ವದಲ್ಲಿ ಯುವಕರ ಆಕಾಂಕ್ಷೆಗಳಿಗೆ ತಕ್ಕಂತೆ ರಾಜಕೀಯ ಬದಲಾಗಬೇಕು,” ಎಂದು ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ಅಣ್ಣಾಮಲೈ ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version