ಟೆಲಿಗ್ರಾಮ್ ನಿಷೇಧ ಸರ್ಕಾರದ ಕನಿಷ್ಠ ಕ್ರಮ: ದೆಹಲಿ ಹೈಕೋರ್ಟ್ ಸಮರ್ಥನೆ

telegram ban
20/06/2026

ನವದೆಹಲಿ: ಮುಂಬರುವ ನಿರ್ಣಾಯಕ ನೀಟ್-ಯುಜಿ (NEET UG) ಮರುಪರೀಕ್ಷೆಯ ಮುನ್ನ ಯಾವುದೇ ರೀತಿಯ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ವದಂತಿಗಳು ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಟೆಲಿಗ್ರಾಮ್ (Telegram) ಆ್ಯಪ್ ಮೇಲೆ ಹೇರಿರುವ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ ಸಮರ್ಥಿಸಿದೆ. ಇದು ಸರ್ಕಾರ ಕೈಗೊಳ್ಳಬಹುದಾದ “ಅತ್ಯಂತ ಕನಿಷ್ಠ ನಿರ್ಬಂಧಿತ ಕ್ರಮ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಜೂನ್ 21 ರಂದು ನಡೆಯಲಿರುವ ನೀಟ್ ಮರುಪರೀಕ್ಷೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

ಟೆಲಿಗ್ರಾಮ್‌ ನಲ್ಲಿರುವ ದೊಡ್ಡ ಸಾರ್ವಜನಿಕ ಚಾನೆಲ್‌ ಗಳು, ಕ್ಲೌಡ್ ಆಧಾರಿತ ಸ್ಟೋರೇಜ್, ಬೃಹತ್ ಬಾಟ್ (bot) ವ್ಯವಸ್ಥೆ ಮತ್ತು ಬಳಕೆದಾರರ ಹೆಸರು (username) ಆಧಾರಿತ ಕಾರ್ಯಾಚರಣೆಗಳಿಂದಾಗಿ ಸುಳ್ಳು ಮಾಹಿತಿ ಹಾಗೂ ವಂಚನೆಗಳನ್ನು ಹರಡಲು ಇದು ಹೆಚ್ಚು ಸುಲಭವಾದ ವೇದಿಕೆಯಾಗಿದೆ ಎಂದು ಕೋರ್ಟ್ ಹೇಳಿದೆ.

ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಇಡೀ ಪ್ಲಾಟ್‌ ಫಾರ್ಮ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಐಟಿ ಸಚಿವಾಲಯದ ನಿರ್ಧಾರವನ್ನು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠವು ಎತ್ತಿಹಿಡಿದಿದೆ. ನಿರ್ದಿಷ್ಟ ಚಾನೆಲ್ ಅಥವಾ ಲಿಂಕ್‌ಗಳನ್ನು ಮಾತ್ರ ಬ್ಲಾಕ್ ಮಾಡುವುದು ನಿಷ್ಪ್ರಯೋಜಕವಾಗಿದೆ, ಏಕೆಂದರೆ ಅವುಗಳನ್ನು ಡಿಲೀಟ್ ಮಾಡಿದರೂ ಬ್ಯಾಕಪ್ ಚಾನೆಲ್‌ಗಳ ಮೂಲಕ ಮತ್ತೆ ಸೃಷ್ಟಿಸಲಾಗುತ್ತಿತ್ತು ಎಂದು ಕೋರ್ಟ್ ಗಮನಿಸಿದೆ.

ಟೆಲಿಗ್ರಾಮ್‌ ನಲ್ಲಿ ಸಂದೇಶ ಹಾಗೂ ಫೈಲ್‌ ಗಳನ್ನು ಕಳುಹಿಸಿದ ನಂತರವೂ ಎಡಿಟ್ ಮಾಡುವ ಆಯ್ಕೆ ಇರುವುದರಿಂದ, ಪರೀಕ್ಷೆ ಮುಗಿದ ನಂತರ ಹಳೆಯ ಮೆಸೇಜ್‌ ಗಳನ್ನು ಎಡಿಟ್ ಮಾಡಿ ಪ್ರಶ್ನೆಪತ್ರಿಕೆ ಮೊದಲೇ ಸೋರಿಕೆಯಾಗಿತ್ತು ಎಂಬಂತೆ ಸುಳ್ಳು ವದಂತಿ ಹಬ್ಬಿಸಿ ಸಾರ್ವಜನಿಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜೂನ್ 30 ರವರೆಗೆ ಈ ಎಡಿಟಿಂಗ್ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಿರುವ ಸರ್ಕಾರದ ಕ್ರಮ ಸೂಕ್ತವಾಗಿದೆ ಎಂದು ಕೋರ್ಟ್ ಹೇಳಿದೆ.

ಪರೀಕ್ಷೆಯ ಪಾವಿತ್ರ್ಯತೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಈ ತುರ್ತು ಕ್ರಮ ಅಗತ್ಯವಾಗಿತ್ತು ಎಂದು ದೆಹಲಿ ಹೈಕೋರ್ಟ್ ತನ್ನ 39 ಪುಟಗಳ ಸುದೀರ್ಘ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version