ಬೋಧಗಯಾ ಮಹಾ ವಿಹಾರದ ಆಡಳಿತವನ್ನು ಬೌದ್ಧರಿಗೆ ಒಪ್ಪಿಸಬೇಕು: ವಿನಯಾಚಾರ್ಯ ಬಂತೇಜಿ ಒತ್ತಾಯ
ಚಾಮರಾಜನಗರ: ಬಿಹಾರದಲ್ಲಿರುವ ಬೌದ್ಧರ ಪವಿತ್ರ ಸ್ಥಳವಾದ ಬೋಧಗಯಾ ಮಹಾ ವಿಹಾರದ ಸಂಪೂರ್ಣ ಆಡಳಿತವನ್ನು ಬೌದ್ಧರಿಗೆ ಒಪ್ಪಿಸಬೇಕು ಹಾಗೂ ಬಿ.ಟಿ.ಆ್ಯಕ್ಟ್–1949ನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಬೌದ್ಧ ಉಪಾಸಕರು, ಅಂಬೇಡ್ಕರ್ ಅನುಯಾಯಿಗಳು ಕೈ ಜೋಡಿಸಬೇಕು ಎಂದು ಬಿಹಾರದ ವಿನಯಾಚಾರ್ಯ ಬಂತೇಜಿ ಒತ್ತಾಯ ಮಾಡಿದ್ದಾರೆ.
ನಗರದ ಹೊರ ವಲಯದ ಯಡಬೆಟ್ಟದಲ್ಲಿರುವ ನಲಂದ ಬೌದ್ಧ ವಿಶ್ವವಿದ್ಯಾನಿಲಯ ಧ್ಯಾನ ಮತ್ತು ಅಧ್ಯಯನ ಕೇಂದ್ರದಲ್ಲಿ ಭಾನುವಾರ ಇಂಟರ್ ನ್ಯಾಷನಲ್ ಬುದ್ಧಿಸ್ಟ್ ಮಾಂಕ್ ಚಾರಿಟಬಲ್ ಟ್ರಸ್ಟ್, ಉಪಾಸಿಕ ಮತ್ತು ಉಪಾಸಕ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ಮಾತೆ ಸಾವಿತ್ರಿ ಬಾಪುಲೆ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೋಧಗಯಾ ಮಹಾವಿಹಾರ ಸಂಪೂರ್ಣವಾಗಿ ಬುದ್ಧರ ಆಧೀನದಲ್ಲಿಲ್ಲ. ಹಾಗಾಗಿ ಆ ಮಹಾ ವಿಹಾರವನ್ನು ಬೌದ್ಧರಿಗಾಗಿ ಬಿಡಿಸಿಕೊಳ್ಳಲು ಹೋರಾಟ ರೂಪಿಸಿದ್ದೇವೆ. ನಮ್ಮ ಪೂರ್ವಿಕರು ಅವಮಾನದ ವಿರುದ್ಧ ಹೋರಾಡಿ ಭೀಮಾ ಕೋರೆಗಾಂವ್ ವಿಜಯೋತ್ಸವ ಸಾಧಿಸಿದ್ದಾರೆ. ಪ್ರಸ್ತುತ ನಾವು ಮಹಾಬೋಧಿ ಮಹಾ ವಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರಿದರು.
ಬಿಹಾರದಲ್ಲಿರುವ ಬೌದ್ಧ ಮಹಾವಿಹಾರವನ್ನು ಬೌದ್ಧರಿಗೆ ಬಿಡಿಸಿಕೊಡಬೇಕೆಂದು ಶ್ರೀಲಂಕಾ ಮತ್ತು ಜಪಾನ್ ದೇಶಗಳು ಪ್ರಯತ್ನ ನಡೆಸಿದವು. ಆದರೆ, ಬೆಂಬಲ ಸಿಗದೆ ಸಾಧ್ಯವಾಗಲಿಲ್ಲ. ನಾವು ಮಹಾವಿಹಾರವನ್ನು ಪಡೆಯಲು ಹೋರಾಟ ಶುರು ಮಾಡಿದ್ದೇವೆ. ದೇಶಾದ್ಯಂತ ಸಂಚಾರ ಮಾಡಿ ಬೌದ್ಧರನ್ನು ಸಂಘಟಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಮಹಿಳಾ ದಿನವಾಗಿ ಘೋಷಿಸಲಿ: ಡಾ.ಟಿ.ಪದ್ಮಶ್ರೀ ಮೈಸೂರಿನ ಮಾನಸ ಗಂಗೋತ್ರಿಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಉಪನ್ಯಾಸಕಿ ಡಾ.ಟಿ.ಪದ್ಮಶ್ರೀ ಮಾತನಾಡಿ, ತೆಲಂಗಾಣ ಸರ್ಕಾರದ ಮಾದರಿಯಲ್ಲಿ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳು ಅಕ್ಷರದವ್ವ ಸಾವಿತ್ರಿಬಾಯಿಫುಲೆ ಅವರ ಜನ್ಮ ದಿನವನ್ನು ಮಹಿಳಾ ದಿನಾಚರಣೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಅಮರಜ್ಯೋತಿ ಬಂತೇಜಿ ಮಾತನಾಡಿದರು. ನಾಗರತ್ನ ಬಂತೇಜಿ, ಯಶ ಬಂತೇಜಿ, ಬಿ.ಆರ್.ರಂಗಸ್ವಾಮಿ, ನಾಗಸಿದ್ದಾರ್ಥ, ಎನ್.ನಾಗಯ್ಯ, ನಲ್ಲೂರು ಪರಮೇಶ್, ಕೃಷ್ಣಯ್ಯ, ಎಂ.ಸಿದ್ದರಾಜು ಸೋಮವಾರಪೇಟೆ, ಭಾರತೀಯ ಬೌದ್ಧ ಮಹಾಸಭಾ ಮಹಿಳಾ ಘಟಕ ಅಧ್ಯಕ್ಷೆ ನಾಗಶಿಲ್ಪ ಸೇರಿದಂತೆ ಇತರರು ಇದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























