ಭೀಮಾ ಕೋರೆಗಾಂವ್ ಯುದ್ಧ ಅಂದ್ರೆ ಏನು? | 28 ಸಾವಿರ ಸೈನಿಕರನ್ನು ಚಿಂದಿ ಉಡಾಯಿಸಿದ್ದ 500 ಸೈನಿಕರಿದ್ದ ದಲಿತರ ಸೇನೆ!
ಭೀಮಾ ಕೋರೆಗಾಂವ್ ಯುದ್ಧವು ಭಾರತೀಯ ಇತಿಹಾಸದಲ್ಲಿ, ಅದರಲ್ಲೂ ವಿಶೇಷವಾಗಿ ದಲಿತ ಸಮುದಾಯದ ಆತ್ಮಗೌರವ ಮತ್ತು ಹೋರಾಟದ ದೃಷ್ಟಿಯಿಂದ ಅತ್ಯಂತ ಮಹತ್ವದ ಘಟನೆಯಾಗಿದೆ. ಈ ಯುದ್ಧವು 1818ರ ಜನವರಿ 1ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಾ ನದಿ ತೀರದ ಕೋರೆಗಾಂವ್ ಗ್ರಾಮದಲ್ಲಿ ನಡೆಯಿತು. ಇದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಮರಾಠಾ ಸಾಮ್ರಾಜ್ಯದ ಪೇಶ್ವೆ ಎರಡನೇ ಬಾಜೀರಾಯನ ಪಡೆಯ ನಡುವೆ ನಡೆದ ಮೂರನೇ ಆಂಗ್ಲೋ–ಮರಾಠಾ ಯುದ್ಧದ ಭಾಗವಾಗಿತ್ತು.
ದಲಿತರ ಸ್ವಾಭಿಮಾನದ ಹೋರಾಟ:
ಇಂದಿಗೂ ಸಮಾಜುದಲ್ಲಿ ಜಾತಿ ಅಸಮಾನತೆ ಎನ್ನುವುದು ಜೀವಂತವಾಗಿತ್ತು. ಆದ್ರೆ ಕಾನೂನಿನ ಭಯಕ್ಕೆ ಇಂದು ಜಾತಿ ಭೇದ ನಡೆಸುವ ಪುಂಡರ ಅಟ್ಟಹಾಸಕ್ಕೆ ಬ್ರೇಕ್ ಬಿದ್ದಿದೆ. ಆದರೂ ಅಲ್ಲೊಬ್ಬರು ಇಲ್ಲೊಬ್ಬರಂತೆ ಬಾಲ ಬಿಚ್ಚುತ್ತಿರುವುದು, ಅಸಮಾನತೆ ಆಚರಿಸುವುದು ಇಂದಿಗೂ ಕಾಣಬಹುದಾಗಿದೆ. ಅಂದಿನ ಕಾಲಘಟ್ಡದಲ್ಲಿ ಮಹರ್ ದಲಿತ ಸಮುದಾಯವನ್ನು ಅಸ್ಪೃಶ್ಯತೆ ಆಚರಣೆಯಿಂದ ನಿರಂತರವಾಗಿ ದಬ್ಬಾಳಿಕೆ ಮಾಡಲಾಗಿತ್ತು. ಹೀಗಾಗಿ ಕೋರೆಗಾಂವ್ ನಲ್ಲಿ ಆಂಗ್ಲೋ–ಮರಾಠಾ ಯುದ್ಧ ನಡೆದಿದ್ದರೂ, ಅದು ದಲಿತರಿಗೆ ಪ್ರಮುಖ ಯುದ್ಧವಾಗಿತ್ತು. ಅವರು ಪೇಶ್ವೆಗಳನ್ನು ಗೆಲ್ಲುವುದು ಬಹಳ ಮುಖ್ಯವಾಗಿತ್ತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪರವಾಗಿ ಸುಮಾರು 500 ಮಹರ್ ಸೈನಿಕರು ಯುದ್ಧಕ್ಕೆ ಇಳಿದಿದ್ದರು. ಆದ್ರೆ, ಪೇಶ್ವೆ ಎರಡನೇ ಬಾಜೀರಾಯನ ನೇತೃತ್ವದ 28,000 ಸೈನಿಕರ ಬೃಹತ್ ಪಡೆಯೇ ರಚನೆಯಾಗಿತ್ತು. ಆದರೆ ದಲಿತ ಸೈನಿಕರು ತೋರಿದ ಕೆಚ್ಚೆದೆಯ ಹೋರಾಟಕ್ಕೆ ಪೇಶ್ವೆಗಳ ಸೈನ್ಯ ಚಿಂದಿಯಾಗಿತ್ತು. ಕೇವಲ 500 ಮಹರ್ ಸೈನಿಕರು 28,000 ಪೇಶ್ವೇ ಸೈನಿಕರನ್ನು ಚಿಂದಿ ಉಡಾಯಿಸಿದ್ದರು.
ಹೋರಾಟದ ಕಿಚ್ಚು: ಪೇಶ್ವೆಗಳ ಆಡಳಿತದಲ್ಲಿ ದಲಿತರು ಅತ್ಯಂತ ಅಮಾನುಷ ಅಸ್ಪೃಶ್ಯತೆಯನ್ನು ಎದುರಿಸುತ್ತಿದ್ದರು. ದಲಿತರು ಉಗುಳಿದ ಉಗುಳು ನೆಲಕ್ಕೆ ತಾಗಬಾರದು ಎಂದು ಕುತ್ತಿಗೆಗೆ ಮಡಕೆ ಕಟ್ಟಲಾಗುತ್ತಿತ್ತು ಮತ್ತು ದಲಿತರ ಹೆಜ್ಜೆ ನೆಲದಲ್ಲಿ ಮೂಡಬಾರದು ಎನ್ನುವ ಕಾರಣಕ್ಕೆ ಸೊಂಟಕ್ಕೆ ಕಸಪೊರಕೆ ಕಟ್ಟುವ ಪದ್ಧತಿಯಿತ್ತು. ಇದನ್ನು ಉಲ್ಲಂಘಿಸಿದರೆ ಅಂತಹ ದಲಿತರಿಗೆ ಮಾನವೀಯತೆಯೇ ಇಲ್ಲದ ಅತ್ಯಂತ ಕ್ರೂರ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಪೇಶ್ವೆಗಳ ದುರಾಡಳಿತಕ್ಕೆ ತಿರುಗೇಟು ನೀಡಲು ಕೋರೆಗಾಂವ್ ಯುದ್ಧ ಮಹರ್ ಸೈನಿಕರಿಗೆ ಒಂದು ವೇದಿಕೆಯಾಗಿತ್ತು.
ಡಾ.ಬಿ.ಆರ್. ಅಂಬೇಡ್ಕರ್ ಮತ್ತು ವಿಜಯ ಸ್ತಂಭ:
ಈ ಯುದ್ಧದ ನೆನಪಿಗಾಗಿ ಬ್ರಿಟಿಷರು ಕೋರೆಗಾಂವ್‌ನಲ್ಲಿ ವಿಜಯ ಸ್ತಂಭವನ್ನು ಸ್ಥಾಪಿಸಿದರು. ಇದರಲ್ಲಿ ಹುತಾತ್ಮರಾದ 22 ಮಹರ್ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ. 1927ರ ಜನವರಿ 1ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ಸ್ಮಾರಕಕ್ಕೆ ಭೇಟಿ ನೀಡಿದರು. ಅಂದಿನಿಂದ ಈ ಸ್ಥಳವು ದಲಿತರ ಪಾಲಿಗೆ ಶಕ್ತಿ ಕೇಂದ್ರವಾಗಿ ಮತ್ತು ಸ್ವಾಭಿಮಾನದ ಸಂಕೇತವಾಗಿ ಬದಲಾಯಿತು. ಪ್ರತಿ ವರ್ಷ ಜನವರಿ 1ರಂದು ಈ ಸ್ಮಾರಕಕ್ಕೆ ಕೋಟ್ಯಂತರ ಜನರು ಭೇಟಿ ನೀಡುತ್ತಾರೆ. ಈ ವಿಜಯ ಸ್ತಂಭಕ್ಕೆ ಗೌರವ ಸಲ್ಲಿಸಲು ಜಮಾಯಿಸುತ್ತಾರೆ. ಇಲ್ಲಿನ ಆಚರಣೆಯು ಕೇವಲ ಗೆಲುವಿನ ಸಂಭ್ರಮವಲ್ಲ; ಅದು ದಲಿತರ ರಾಜಕೀಯ ಪ್ರಜ್ಞೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಪ್ರತಿಬಿಂಬವಾಗಿದೆ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಈ ಆಚರಣೆಯ ಸುತ್ತ ಸಾಂಸ್ಕೃತಿಕ ಸಂಘರ್ಷಗಳು ಉಂಟಾಗುತ್ತಿರುವುದು ಚರ್ಚಾರ್ಹ ಸಂಗತಿಯಾಗಿದೆ. ಭೀಮಾ ಕೋರೆಗಾಂವ್ ಯುದ್ಧದ ಕಥೆಯು ಇತಿಹಾಸದ ಪುಟಗಳಲ್ಲಿ ಮರೆಯಾಗಿದ್ದರೂ, ಅಂಬೇಡ್ಕರ್ ಅವರ ದೃಷ್ಟಿಕೋನದಿಂದಾಗಿ ಅದು ಇಂದು ದಲಿತ ಚಳವಳಿಯ ಬಹುದೊಡ್ಡ ಶಕ್ತಿಯಾಗಿದೆ. ಶೋಷಿತರಿಗೆ ಆತ್ಮಗೌರವದ ಹಾದಿಯನ್ನು ತೋರಿಸಿಕೊಟ್ಟ ಈ ಯುದ್ಧವು, ಸಮಾನತೆಯ ಭಾರತವನ್ನು ಕಟ್ಟುವಲ್ಲಿ ಸದಾ ಸ್ಫೂರ್ತಿದಾಯಕವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























