ಗಂಡ ಹೆಂಡತಿಯ ಜಗಳಕ್ಕೆ ಬಲಿಯಾದ ಮೂವರು ಅಮಾಯಕ ಮಕ್ಕಳು!

tea
07/02/2024

ಅಮರಾವತಿ: ಗಂಡ ಹೆಂಡತಿಯ ಜಗಳಕ್ಕೆ ಮೂವರು ಮುಗ್ಧ ಅಮಾಯಕ ಮಕ್ಕಳು ಬಲಿಯಾಗಿರುವ ಘಟನೆ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ವರದಿಯಾಗಿದೆ.

ಪಲ್ನಾಡು ಜಿಲ್ಲೆಯ ಮಾಚರ್ಲ ಮಂಡಲ ನಾರಾಯಣಪುರ ತಾಂಡಾದ ರವಿ ನಾಯ್ಕ್ ಮನೆಯಲ್ಲಿ ಈ ದುರಂತ ಘಟನೆ ನಡೆದಿದೆ. ರವಿ ನಾಯ್ಕ್ ಹೈದರಾಬಾದ್ ನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದು,12 ವರ್ಷಗಳ ಹಿಂದೆ ವಸಂತಾ ಎನ್ನುವವರನ್ನು ವಿವಾಹವಾಗಿದ್ದರು. ಅವರಿಗೆ ನಾಲ್ವರು ಗಂಡು ಮಕ್ಕಳಿದ್ದಾರೆ. ಹೈದರಾಬಾದ್ ನಲ್ಲಿ ಆಟೋ ಓಡಿಸುವ ರವಿನಾಯಕ್ ವಾರಕ್ಕೊಮ್ಮೆ ಅಥವಾ ಹತ್ತು ದಿನಕ್ಕೊಮ್ಮೆ ಮನೆಗೆ ಬಂದು ಹೆಂಡತಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದರು.

ವಿವಾಹದ ವೇಳೆ ರವಿ ನಾಯ್ಕ್ ಎರಡು ಎಕರೆ ಜಮೀನು ವರದಕ್ಷಿಣೆಯಾಗಿ ನೀಡಲಾಗಿತ್ತು. ರವಿ ನಾಯ್ಕ್ ಸಾಲಬಾಧೆಯಿಂದ ಅದರಲ್ಲಿ ಒಂದು ಎಕರೆಯನ್ನು ಮಾರಲು ರವಿ ನಾಯ್ಕ್ ನಿರ್ಧರಿಸಿದ್ದರು. ಆದರೆ ಜಮೀನು ಮಾರಾಟ ಮಾಡಲು ಪತ್ನಿ ವಸಂತಾ ವಿರೋಧಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಯ ನಡುವೆ ಗಲಾಟೆ ನಡೆದಿತ್ತು.

ಇದೇ ಕೋಪದಲ್ಲಿ ಪತ್ನಿ ವಸಂತಾ ಬೆಳಗ್ಗೆ ಟೀಯಲ್ಲಿ ಇಲಿ ವಿಷ ಬೆರೆಸಿ ಮಕ್ಕಳು ಹಾಗೂ ಪತಿಗೆ ನೀಡಿದ್ದಾರೆ. ಜೊತೆಗೆ ತಾನೂ ಕುಡಿದಿದ್ದಾರೆ. ಆದರೆ ಚಹಾದ ರುಚಿ ಮತ್ತು ವಾಸನೆ ಬೇರೆಯಾಗಿರುವುದನ್ನು ಗಮನಿಸಿದ ರವಿ ನಾಯ್ಕ್ ಸ್ವಲ್ಪ ಕುಡಿದು ಆಮೇಲೆ ಪಕ್ಕಕ್ಕೆ ಇಟ್ಟಿದ್ದಾರೆ. ಆದರೆ ಅದಕ್ಕೂ ಮುನ್ನ ಮಕ್ಕಳು ಸಂಪೂರ್ಣವಾಗಿ ಕುಡಿದಿದ್ದರು. ಆ ಬಳಿಕ ವಾಂತಿಭೇದಿಯಿಂದ ತೀವ್ರ ಅಸ್ವಸ್ಥರಾದರು. ಕೂಡಲೇಸ್ಥಳೀಯರು ಮಕ್ಕಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ಫಲಕಾರಿಯಾಗದೆ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.

ಸದ್ಯ ಪತಿ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರವಿ ನಾಯ್ಕ್ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ವಸಂತ ಗುಂಟೂರು ಜಿಜಿಎಚ್ ನಲ್ಲಿ ದಾಖಲಾಗಿದ್ದಾರೆ.

ಇನ್ನು, ಚಹಾದಲ್ಲಿ ತಾನೇ ಇಲಿ ಪಾಷಾಣ ಬೆರೆಸಿರುವುದನ್ನು ವಸಂತಾ ಒಪ್ಪಿಕೊಂಡಿದ್ದಾರೆ. ಮೂವರು ಅಮಾಯಕ ಮಕ್ಕಳನ್ನು ಕಳೆದುಕೊಂಡ ಕುಟುಂಬ ಕಂಗಾಲಾಗಿದೆ.

ಇತ್ತೀಚಿನ ಸುದ್ದಿ

Exit mobile version