ರಷ್ಯಾ ಅಧ್ಯಕ್ಷ ಪುಟಿನ್ ಜತೆ ಟ್ರಂಪ್ ಮಾತುಕತೆ ಎಂಬ ಕಟ್ಟುಕತೆ: ಸುಳ್ಳು ಹೇಳಿದ ಅಮೆರಿಕದ ಕೆಲ ಮಾಧ್ಯಮ
ಕಳೆದ ವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬ ಅಮೆರಿಕದ ಮಾಧ್ಯಮಗಳು ಬಿತ್ತರಿಸಿದ ವರದಿಗಳನ್ನು ರಷ್ಯಾ ಸೋಮವಾರ ತಳ್ಳಿ ಹಾಕಿದೆ.
“ಇಬ್ಬರ ಮಧ್ಯೆ ಯಾವುದೇ ಸಂಭಾಷಣೆ ನಡೆದಿಲ್ಲ… ಇದು ಸಂಪೂರ್ಣವಾಗಿ ಸುಳ್ಳು, ಇದು ಶುದ್ಧ ಕಾಲ್ಪನಿಕ” ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಮಾಸ್ಕೋದಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧದ ನಿರ್ಣಾಯಕ ಚುನಾವಣಾ ವಿಜಯದ ನಂತರ ಟ್ರಂಪ್ ಅವರು ಫ್ಲೋರಿಡಾದ ತಮ್ಮ ಮಾರ್-ಎ-ಲಾಗೋ ಎಸ್ಟೇಟ್ ನಿಂದ ಪುಟಿನ್ ಅವರಿಗೆ ಕರೆ ಮಾಡಿದ್ದಾರೆ ಎಂದು ಅಮೆರಿಕದ ಪ್ರಮುಖ ಮಾಧ್ಯಮ ಪ್ರಕಟಣೆ ಭಾನುವಾರ ತಡರಾತ್ರಿ ವರದಿ ಮಾಡಿದೆ.
ಉಭಯ ನಾಯಕರ ನಡುವೆ ಸಂಭಾಷಣೆ ನಡೆದಿದೆ ಎಂಬ ಕಪೋಲ ಕಲ್ಪಿತ ವರದಿಗಳನ್ನು ಪ್ರಕಟಿಸಿದ ಅಮೆರಿಕ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ರಷ್ಯಾದ ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿಯು ಪ್ರಶ್ನಿಸಿದ್ದಾರೆ. “ಇದು ಈಗಿನ ಮಾಧ್ಯಮಗಳ ಕಳಪೆ ಗುಣಮಟ್ಟದ ವರದಿಗಾರಿಕೆಗೆ ಅತ್ಯಂತ ಸ್ಪಷ್ಟ ಉದಾಹರಣೆ. ಕೆಲವೊಮ್ಮೆ ಸಾಕಷ್ಟು ಗೌರವಾನ್ವಿತ ಮಾಧ್ಯಮಗಳು ಸಹ ಇಂಥ ತಪ್ಪು ಮಾಡುತ್ತಿವೆ” ಎಂದು ಪೆಸ್ಕೊವ್ ರಷ್ಯಾದ ಟಾಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷವು ಮತ್ತಷ್ಟು ಉಲ್ಬಣಗೊಳ್ಳದಂತೆ ತಪ್ಪಿಸಬೇಕೆಂದು ಟ್ರಂಪ್ ಪುಟಿನ್ ರಿಗೆ ಮನವಿ ಮಾಡಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದ್ದವು.. ಟ್ರಂಪ್ ಮತ್ತು ಪುಟಿನ್ ತಮ್ಮ ಸಂಭಾಷಣೆಯ ಸಮಯದಲ್ಲಿ, ಯುದ್ಧ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮಾಸ್ಕೋದೊಂದಿಗೆ ಹೆಚ್ಚಿನ ಚರ್ಚೆ ನಡೆಸುವ ಆಸಕ್ತಿಯನ್ನು ಟ್ರಂಪ್ ವ್ಯಕ್ತಪಡಿಸಿದರು ಎಂದು ಅಮೆರಿಕನ್ ಮಾಧ್ಯಮಗಳ ವರದಿಯಲ್ಲಿ ಹೇಳಲಾಗಿತ್ತು. ಯುರೋಪ್ ನಲ್ಲಿ ಗಣನೀಯ ಯುಎಸ್ ಮಿಲಿಟರಿ ಉಪಸ್ಥಿತಿಯ ಮಹತ್ವವನ್ನು ಟ್ರಂಪ್ ಎತ್ತಿ ತೋರಿಸಿದ್ದಾರೆ ಎಂದು ವರದಿ ಹೇಳಿತ್ತು. ಇದನ್ನೇ ಭಾರತೀಯ ಮಾಧ್ಯಮಗಳು ಕೂಡ ಮರುಪ್ರಸಾರ ಮಾಡಿದ್ದವು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

























