ಕ್ರಿಕೆಟ್ ಚೆಂಡು ವೃದ್ಧೆಗೆ ತಗುಲಿದ್ದಕ್ಕೆ ಇಬ್ಬರು ಬಾಲಕರನ್ನು ಕಿಟಕಿಗೆ ಕಟ್ಟಿಹಾಕಿ ಹಲ್ಲೆ!
ಬಾಗಲಕೋಟೆ: ಕ್ರಿಕೆಟ್ ಆಡುವಾಗ ಆಕಸ್ಮಿಕವಾಗಿ ವೃದ್ಧೆಯೊಬ್ಬರಿಗೆ ಚೆಂಡು ತಗುಲಿದ ಕಾರಣಕ್ಕೆ ಇಬ್ಬರು ಅಪ್ರಾಪ್ತ ಬಾಲಕರನ್ನು ಶಾಲೆಯ ಕಿಟಕಿಗಳಿಗೆ ಕಟ್ಟಿ ಹಾಕಿ ಅಮಾನವೀಯವಾಗಿ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನರೆನೂರ ತಾಂಡಾದಲ್ಲಿ ನಡೆದಿದೆ.
ತಾಂಡಾದಲ್ಲಿ ಬಾಲಕರು ಕ್ರಿಕೆಟ್ ಆಟವಾಡುತ್ತಿದ್ದ ಸಮಯದಲ್ಲಿ, 8ನೇ ತರಗತಿ ವಿದ್ಯಾರ್ಥಿಯೊಬ್ಬ ಬ್ಯಾಟ್ ಮಾಡಿದ ಚೆಂಡು ಅಲ್ಲಿಯೇ ಇದ್ದ ವೃದ್ಧೆಯೊಬ್ಬರಿಗೆ ಆಕಸ್ಮಿಕವಾಗಿ ತಗುಲಿದೆ. ಇದರಿಂದ ತೀವ್ರ ಆಕ್ರೋಶಗೊಂಡ ವೃದ್ಧೆಯ ಕುಟುಂಬಸ್ಥರು, ಆಟವಾಡುತ್ತಿದ್ದ ಇಬ್ಬರು ಬಾಲಕರನ್ನು ಹಿಡಿದು ಸ್ಥಳೀಯ ಶಾಲೆಯ ಕಿಟಕಿಗಳಿಗೆ ಕಟ್ಟಿಹಾಕಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ಬಾಲಕನನ್ನು ಸದ್ಯ ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಲಕನ ಮೇಲೆ ನಡೆದಿರುವ ಈ ದೌರ್ಜನ್ಯದ ವಿರುದ್ಧ ಬಾಲಕನ ಪೋಷಕರು ಹಾಗೂ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಿದ್ದಾರ್ಥ ಗೋಯಲ್ ಅವರು, “ಮಕ್ಕಳ ಮೇಲೆ ಹಿಂಸೆ ಹಾಗೂ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನರೇನೂರ ತಾಂಡಾದ ನಿವಾಸಿಗಳಾದ ರೇಣುಕಾ ಗೋಪಾಲ ಲಮಾಣಿ, ಬಸವರಾಜ ಗೋಪಾಲ ಲಮಾಣಿ ಹಾಗೂ ಅಭಿ ಶಿವಪ್ಪ ಲಮಾಣಿ ಎಂಬ ಮೂವರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಸದ್ಯ ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ಮುಂದಿನ ಕಾನೂನು ಪರಿಶೀಲನೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























