ಲಂಡನ್ ನ ರಸ್ತೆಯಲ್ಲಿ ಪಾನ್ ತಿಂದು ಉಗುಳಿದ ಇಬ್ಬರು ಭಾರತೀಯರಿಗೆ 3.46 ಲಕ್ಷ ರೂ. ದಂಡ!

spitting paan in london
20/03/2026

ಲಂಡನ್: ವಿದೇಶಗಳಲ್ಲಿ ನಾಗರಿಕ ನಿಯಮಗಳು ಎಷ್ಟು ಕಠಿಣವಾಗಿರುತ್ತವೆ ಎಂಬುದಕ್ಕೆ ಈ ಘಟನೆ ಒಂದು ಸಾಕ್ಷಿ. ಲಂಡನ್‌ ನ ಬ್ರೆಂಟ್ ಬರೋ (Brent Borough) ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪಾನ್ ತಿಂದು ಉಗುಳಿದ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳಿಗೆ ಅಲ್ಲಿನ ಸ್ಥಳೀಯ ಸಂಸ್ಥೆ ಮತ್ತು ನ್ಯಾಯಾಲಯ ಭಾರಿ ಮೊತ್ತದ ದಂಡ ವಿಧಿಸಿದೆ.

ಅಕ್ಷಿತ್‌ಕುಮಾರ್ ಭದ್ರೆ ಪಟೇಲ್ (31) ಮತ್ತು ಹಿತೇಶ್ ಪಟೇಲ್ (32) ಎಂಬುವವರೇ ದಂಡಕ್ಕೊಳಗಾದವರು. ಅಕ್ಷಿತ್‌ ಕುಮಾರ್ 2025ರ ಜೂನ್ 11ರಂದು ಕಿಂಗ್ಸ್‌ ಬರಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಪಾನ್ ಉಗುಳುತ್ತಿರುವುದು ಕಂಡುಬಂದಿತ್ತು. ಮರುದಿನವೇ ಹಿತೇಶ್ ಪಟೇಲ್ ಅವರು ನಾರ್ತ್ ವೆಂಬ್ಲಿ ನಿಲ್ದಾಣದ ಬಳಿ ಇದೇ ರೀತಿಯ ಕೃತ್ಯ ಎಸಗಿದ್ದರು.

ಆರಂಭದಲ್ಲಿ, ಇಬ್ಬರಿಗೂ ತಲಾ £100 (ಸುಮಾರು 10,500 ರೂ.) ಗಳ ಆನ್–ದ–ಸ್ಪಾಟ್ (ಸ್ಥಳದಲ್ಲೇ) ದಂಡ ವಿಧಿಸಲಾಗಿತ್ತು. ಆದರೆ, ಇವರಿಬ್ಬರೂ ನಿಗದಿತ ಸಮಯದಲ್ಲಿ ದಂಡವನ್ನು ಪಾವತಿಸಲಿಲ್ಲ ಮತ್ತು ನ್ಯಾಯಾಲಯದ ವಿಚಾರಣೆಗೂ ಹಾಜರಾಗಲಿಲ್ಲ. ಇದರಿಂದ ಕೆರಳಿದ ನ್ಯಾಯಾಲಯವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿತು. ಅಂತಿಮವಾಗಿ ನ್ಯಾಯಾಲಯವು ಇಬ್ಬರಿಗೂ ತಲಾ £1,391 (ಸುಮಾರು 1.73 ಲಕ್ಷ ರೂ.) ಪಾವತಿಸುವಂತೆ ಆದೇಶಿಸಿತು. ಒಟ್ಟಾರೆಯಾಗಿ ಇಬ್ಬರೂ ಸೇರಿ ಸುಮಾರು 3.46 ಲಕ್ಷ ರೂಪಾಯಿಗಳನ್ನು ದಂಡದ ರೂಪದಲ್ಲಿ ನೀಡಬೇಕಿದೆ.

ಬ್ರೆಂಟ್ ಕೌನ್ಸಿಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ನಮ್ಮ ರಸ್ತೆಗಳನ್ನು ಗಲೀಜು ಮಾಡುವವರ ವಿರುದ್ಧ ನಾವು ‘ಶೂನ್ಯ ಸಹಿಷ್ಣುತೆ’ (Zero Tolerance) ನೀತಿಯನ್ನು ಅನುಸರಿಸುತ್ತಿದ್ದೇವೆ. ಪಾನ್ ಉಗುಳುವುದರಿಂದ ರಸ್ತೆಗಳು ಮತ್ತು ಸಾರ್ವಜನಿಕ ಆಸ್ತಿಗಳ ಮೇಲೆ ಅಳಿಸಲಾಗದ ಕಲೆಗಳು ಉಂಟಾಗುತ್ತವೆ. ಇವುಗಳನ್ನು ಸ್ವಚ್ಛಗೊಳಿಸಲು ಕೌನ್ಸಿಲ್ ಪ್ರತಿ ವರ್ಷ ಸುಮಾರು £30,000 (33 ಲಕ್ಷ ರೂ.ಗಿಂತ ಹೆಚ್ಚು) ಖರ್ಚು ಮಾಡುತ್ತಿದೆ” ಎಂದು ತಿಳಿಸಿದೆ.

“ನೀವು ನಮ್ಮ ರಸ್ತೆಗಳನ್ನು ಹಾಳು ಮಾಡಿದರೆ, ನಾವು ನಿಮ್ಮನ್ನು ಹುಡುಕಿ ದಂಡ ವಿಧಿಸುತ್ತೇವೆ” ಎಂದು ಕೌನ್ಸಿಲ್ ಸದಸ್ಯೆ ಕೃಪಾ ಶೇತ್ ಎಚ್ಚರಿಕೆ ನೀಡಿದ್ದಾರೆ.

ಈ ಘಟನೆಯು ವಿದೇಶಕ್ಕೆ ಹೋಗುವ ಭಾರತೀಯರು ಅಲ್ಲಿನ ಸ್ವಚ್ಛತಾ ನಿಯಮಗಳನ್ನು ಪಾಲಿಸುವುದು ಎಷ್ಟು ಮುಖ್ಯ ಎಂಬುದನ್ನು ನೆನಪಿಸಿದೆ. ಅಲ್ಲದೇ ಭಾರತದಲ್ಲಿಯೂ ಇಂತಹ ನಿಯಮಗಳನ್ನು ತರಬೇಕು. ಕೊನೆಯ ಪಕ್ಷ ರಾಜ್ಯ ಸರ್ಕಾರಗಳು ಇಂತಹ ಕ್ರಮಕ್ಕೆ ಮುಂದಾಗಬೇಕು. ಇದರಿಂದ  ದಂಡದ ಹಣವೂ ಸರ್ಕಾರಕ್ಕೆ ಸಿಗುತ್ತದೆ, ನಮ್ಮ ನಗರಗಳೂ ಸ್ವಚ್ಛವಾಗಿರುತ್ತದೆ ಎನ್ನುವ ಮಾತುಗಳು ಕೇಳಿ ಬಂದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version