12:21 AM Thursday 21 - August 2025

ಮುಸ್ಲಿಂ ಯುವಕರ ಮೇಲಿತ್ತು ದ್ವೇಷ: ಗೋಹತ್ಯೆಯ ಖತರ್ನಾಕ್ ಪ್ಲ್ಯಾನ್ ಮಾಡಿದ ಬಜರಂಗದಳ, ವಿಎಚ್ ಪಿ ಮುಖಂಡರು ಜೈಲಿಗೆ

02/02/2024

ಮುಸ್ಲಿಂ ಯುವಕರನ್ನು ಸಿಲುಕಿಸುವುದಕ್ಕಾಗಿ ಗೋ ಹತ್ಯೆ ಮಾಡಿದ ಉತ್ತರ ಪ್ರದೇಶದ ಮೊರಾದಾಬಾದ್ ನ ಬಜರಂಗದಳದ ಸದಸ್ಯರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ತಿನ ಮುಖಂಡರು ಸಹಿತ ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಮುಸ್ಲಿಂ ವ್ಯಕ್ತಿಯನ್ನು ಗೋಹತ್ಯೆಯ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಗೋಹತ್ಯೆ ಮಾಡಿದ ಆರೋಪದ ಮೇಲೆ ಬಜರಂಗದಳದ ಮೊರಾದಾಬಾದ್ ಜಿಲ್ಲಾಧ್ಯಕ್ಷ ಸೇರಿದಂತೆ ನಾಲ್ವರನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಮೊರಾದಾಬಾದ್ ಜಿಲ್ಲೆಯ ಚೇತ್ರಂಪುರ ಗ್ರಾಮದ ಶಹಾಬುದ್ದೀನ್, ಬಜರಂಗದಳದ ಮುಖಂಡ ಮೋನು ಬಿಷ್ಣೋಯ್ ಅಲಿಯಾಸ್ ಸುಮಿತ್ ಮತ್ತು ಆತನ ಸಹಚರರಾರ ರಮಣ್ ಚೌಧರಿ ಮತ್ತು ರಾಜೀವ್ ಚೌಧರಿ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ ಶಹಾಬುದ್ದೀನ್‌ಗೆ, ಮಕ್ಸೂದ್ ಎಂಬಾತನ ಜೊತೆ ವೈಯಕ್ತಿಕ ವೈಷಮ್ಯ ಇತ್ತು. ಈತ ಬಜರಂಗದಳದ ಕಾರ್ಯಕರ್ತರ ಸಹಾಯವನ್ನು ಪಡೆದು ಗೋಹತ್ಯೆ ಕೇಸ್‌ನಲ್ಲಿ ಮಕ್ಸೂದ್ ಎಂಬಾತನನ್ನು ಜೈಲಿಗೆ ಕಳುಹಿಸಿದ್ದಾನೆ. ಹರಿದ್ವಾರಕ್ಕೆ ಹೋಗಲು ಶ್ರಾವಣ ಮಾಸದಲ್ಲಿ ಹಿಂದೂ ಯಾತ್ರಿಕರು ಹೆಚ್ಚಾಗಿ ಬಳಸುವ ರಸ್ತೆಯಾದ ಕನ್ವರ್ ಪಥ್‌ನಿಂದ ಜನವರಿ 16ರಂದು ಹಸುವಿನ ತಲೆಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದರ ನಂತರ ಜನವರಿ 28ರ ರಾತ್ರಿ ಗೋಹತ್ಯೆಯ ಮತ್ತೊಂದು ಘಟನೆ ಕೆಲವು ಕಿಲೋಮೀಟರ್ ದೂರದಲ್ಲಿರುವ ಚೆತ್ರಾಮ್‌ಪುರ ಗ್ರಾಮದಲ್ಲಿ ನಡೆದಿದೆ. ಎರಡೂ ಘಟನೆಗಳು ಅನುಮಾನಾಸ್ಪದ ಮತ್ತು ಪರಸ್ಪರ ಸಂಬಂಧವನ್ನು ಹೊಂದಿರುವಂತೆ ಕಂಡು ಬಂದಿತ್ತು. ಇದು ಕೇವಲ ಗೋಹತ್ಯೆಯ ಪ್ರಕರಣವಲ್ಲ, ಖಂಡಿತವಾಗಿಯೂ ಅದರಲ್ಲಿ ಕೆಲವು ಹಿಡನ್ ಅಜೆಂಡಾ ಇದೆ ಎಂಬ ಅನುಮಾನವಿತ್ತು ಎಂದು ಮೊರಾದಾಬಾದ್‌ನ ಪೊಲೀಸ್ ಅಧೀಕ್ಷಕ ಹೇಮರಾಜ್ ಮೀನಾ ಹೇಳಿದ್ದಾರೆ.

ಎರಡನೇ ಘಟನೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಒಬ್ಬ ವ್ಯಕ್ತಿಯ ಪ್ಯಾಂಟ್ ಮತ್ತು ಮಕ್ಸೂದ್ ಅವರ ಫೋಟೋ ಇರುವ ವ್ಯಾಲೆಟ್ ಪತ್ತೆಯಾಗಿದೆ. ಈ ಬಗ್ಗೆ ಮಕ್ಸೂದ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಗ್ರಾಮದ ಕೆಲವು ಜನರೊಂದಿಗೆ ದ್ವೇಷವನ್ನು ಹೊಂದಿದ್ದರು ಎಂದು ಹೇಳಿದ್ದಾರೆ. ಈ ಕಾರಣದಿಂದಾಗಿ ಆತನ ವಿರುದ್ಧ ಪಿತೂರಿ ನಡೆಸಿರುವ ಬಗ್ಗೆ ಹೇಳಿದ್ದಾರೆ. ಇದೇ ವೇಳೆ ಶಹಾಬುದ್ದೀನ್ ಹೆಸರನ್ನು ಮಕ್ಸೂದ್ ಹೇಳಿದ್ದಾರೆ. ಶಹಾಬುದ್ದೀನ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಮೋನು ಬಿಷ್ಣೋಯ್, ರಾಜೀವ್ ಚೌಧರಿ ಮತ್ತು ರಮಣ್ ಚೌಧರಿ ಅವರ ಸಹಾಯವನ್ನು ಪಡೆದು ಕೃತ್ಯವನ್ನು ನಡೆಸಿರುವುದು ಬಹಿರಂಗವಾಗಿದೆ ಎಂದು ಹೇಮರಾಜ್ ಮೀನಾ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version