ವೈರಲ್ ವಿಡಿಯೋ ಪ್ರಕರಣ: ಇಬ್ಬರು ರೌಡಿಶೀಟರ್ ಗಳ ವಿರುದ್ಧ ದೂರು ನೀಡಿದ ಮಹಿಳಾ ಪೊಲೀಸ್ ಅಧಿಕಾರಿ
ಸಾಮಾಜಿಕ ಜಾಲತಾಣಗಳಲ್ಲಿ ಖೈದಿಯೊಂದಿಗಿನ ವಾಟ್ಸಪ್ ವಿಡಿಯೋ ಕಾಲ್ ತುಣುಕು ವೈರಲ್ ಆದ ಬೆನ್ನಲ್ಲೇ, ಸದ್ಯ ಮೆಟ್ರೋ ನಿಲ್ದಾಣದ ಸೆಕ್ಯೂರಿಟಿ ಉಸ್ತುವಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಖೈದಿಯೊಂದಿಗೆ ಮಾತನಾಡಿದ್ದ ವಿಡಿಯೋ ಕಾಲ್ ವೈರಲ್ ಆಗಿ ಪೊಲೀಸ್ ಇಲಾಖೆಗೆ ಮುಜುಗರ ಉಂಟುಮಾಡಿದ ಹಿನ್ನೆಲೆಯಲ್ಲಿ ಮಹಿಳಾ ಅಧಿಕಾರಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ತಮ್ಮ ದೂರಿನಲ್ಲಿ ರೌಡಿಶೀಟರ್ ಗಳಾದ ಧರ್ಮ ಮತ್ತು ಸಾಯಿಕುಮಾರ್ ಅವರ ಹೆಸರುಗಳನ್ನು ಉಲ್ಲೇಖಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ದೂರಿನಲ್ಲಿ ಏನಿದೆ?
“ಕೆಲ ವರ್ಷಗಳ ಹಿಂದೆ ನಾನು ರೌಡಿಶೀಟರ್ ಧರ್ಮ ಜೊತೆ ಆತ್ಮೀಯವಾಗಿದ್ದೆ. ಆ ಸಂದರ್ಭದಲ್ಲಿ ಆತನೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಾಗ ಆತನೇ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದನು. ನಂತರ ಆ ವಿಡಿಯೋವನ್ನು ರೌಡಿಶೀಟರ್ ಸಾಯಿಕುಮಾರ್ ಗೆ ನೀಡಿ ವೈರಲ್ ಮಾಡಿಸಿದ್ದಾನೆ,” ಎಂದು ಮಹಿಳಾ ಅಧಿಕಾರಿ ತಿಳಿಸಿದ್ದಾರೆ.
ಸಮಾಜದಲ್ಲಿ ತಮಗೆ ಒಳ್ಳೆಯ ಹೆಸರಿದ್ದು, ಮದುವೆಯಾಗಿ ಮಕ್ಕಳಿದ್ದಾರೆ. ಈ ವಿಡಿಯೋ ವೈರಲ್ ಮಾಡುವ ಮೂಲಕ ತಮ್ಮ ಮಾನಹಾನಿ ಹಾಗೂ ಮರ್ಯಾದೆಗೆ ಧಕ್ಕೆ ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮಹಿಳಾ ಅಧಿಕಾರಿಯ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸರು ಎನ್ ಸಿಆರ್ (NCR) ದಾಖಲಿಸಿಕೊಂಡಿದ್ದಾರೆ. ಖೈದಿಗೆ ಜೈಲಿನೊಳಗೆ ಮೊಬೈಲ್ ಸಿಕ್ಕಿದ್ದು ಹೇಗೆ ಹಾಗೂ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























