ಇರಾನ್ ಪರಮೋಚ್ಚ ನಾಯಕನಾಗಿ ಖಮೇನಿ ಪುತ್ರ ಮೊಜ್ತಬಾ ಖಮೇನಿ ಆಯ್ಕೆ: ನೆರಳಿನಂತಿದ್ದ ಮೊಜ್ತಬಾಗೆ ನಾಯಕತ್ವ
ತೆಹ್ರಾನ್: ಇರಾನ್ ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ, ಅವರ ಪುತ್ರ ಮೊಜ್ತಬಾ ಖಮೇನಿ (Mojtaba Khamenei) ಅವರು ದೇಶದ ಮುಂದಿನ ಸುಪ್ರೀಂ ಲೀಡರ್ ಆಗಿ ಆಯ್ಕೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದು ಇರಾನ್ ರಾಜಕೀಯದಲ್ಲಿ ಒಂದು ಐತಿಹಾಸಿಕ ಮತ್ತು ವಿವಾದಾತ್ಮಕ ಬದಲಾವಣೆಯಾಗಿದೆ.
ಇರಾನ್ ನ ಶಕ್ತಿಯುತ ಧಾರ್ಮಿಕ ಮಂಡಳಿಯಾದ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ (Assembly of Experts) ಮಂಗಳವಾರ ಸಭೆ ಸೇರಿ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ. ಇರಾನ್ ನ ಪ್ರಬಲ ಸೇನಾ ಪಡೆಯಾದ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಒತ್ತಡದ ಮೇರೆಗೆ ಈ ಆಯ್ಕೆ ನಡೆದಿದೆ ಎಂದು ಹೇಳಲಾಗುತ್ತಿದೆ.
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ರಾಜಪ್ರಭುತ್ವವನ್ನು ವಿರೋಧಿಸುತ್ತಾ ಬಂದಿದೆ. ಆದರೆ ಈಗ ತಂದೆಯ ನಂತರ ಮಗನೇ ಅಧಿಕಾರಕ್ಕೆ ಬರುತ್ತಿರುವುದು ವಂಶಪಾರಂಪರ್ಯ ಆಡಳಿತಕ್ಕೆ ದಾರಿ ಮಾಡಿಕೊಡುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಯಾರು ಈ ಮೊಜ್ತಬಾ ಖಮೇನಿ?
56 ವರ್ಷದ ಮೊಜ್ತಬಾ, ಅಲಿ ಖಮೇನಿ ಅವರ ಎರಡನೇ ಮಗ. ಇವರು ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳದಿದ್ದರೂ, ತೆರೆಯ ಮರೆಯಲ್ಲಿ ಭಾರಿ ಪ್ರಭಾವ ಹೊಂದಿದ್ದಾರೆ. ಇರಾನ್ ನ ರೆವಲ್ಯೂಷನರಿ ಗಾರ್ಡ್ಸ್ (IRGC) ಮತ್ತು ಗುಪ್ತಚರ ಇಲಾಖೆಗಳ ಮೇಲೆ ಇವರು ಬಲವಾದ ಹಿಡಿತ ಹೊಂದಿದ್ದಾರೆ. ಇರಾನ್–ಇರಾಕ್ ಯುದ್ಧದಲ್ಲಿಯೂ ಇವರು ಭಾಗವಹಿಸಿದ್ದರು. ಇವರು ಈವರೆಗೆ ಯಾವುದೇ ಚುನಾಯಿತ ಅಥವಾ ಅಧಿಕೃತ ಸರ್ಕಾರಿ ಹುದ್ದೆಯನ್ನು ಅಲಂಕರಿಸಿಲ್ಲ. ಆದರೂ ತಮ್ಮ ತಂದೆಯ ಕಚೇರಿಯನ್ನು ನಿರ್ವಹಿಸುವ ಮೂಲಕ ದೇಶದ ಪ್ರಮುಖ ನಿರ್ಧಾರಗಳಲ್ಲಿ ಭಾಗಿಯಾಗುತ್ತಿದ್ದರು. 2019ರಲ್ಲಿ ಅಮೆರಿಕವು ಇವರ ಮೇಲೆ ನಿರ್ಬಂಧಗಳನ್ನು ಹೇರಿತ್ತು. ಅಧಿಕೃತ ಹುದ್ದೆ ಇಲ್ಲದಿದ್ದರೂ ತಂದೆಯ ಪರವಾಗಿ ಆಡಳಿತ ನಡೆಸುತ್ತಿದ್ದಾರೆ ಎಂಬುದು ಅಮೆರಿಕದ ಆರೋಪವಾಗಿತ್ತು.
ಇರಾನ್ ನ ಸಂವಿಧಾನದ ಪ್ರಕಾರ, ಸುಪ್ರೀಂ ಲೀಡರ್ ಆಗುವವರು ಉನ್ನತ ಮಟ್ಟದ ಧಾರ್ಮಿಕ ವಿದ್ವಾಂಸರಾಗಿರಬೇಕು (Ayatollah). ಆದರೆ ಮೊಜ್ತಬಾ ಅವರು ಆ ಮಟ್ಟದ ಧಾರ್ಮಿಕ ಪದವಿಯನ್ನು ಹೊಂದಿಲ್ಲದಿರುವುದು ಮತ್ತು ಜನಸಾಮಾನ್ಯರಲ್ಲಿ ಅವರ ಬಗ್ಗೆ ಇರುವ ಮಿಶ್ರ ಪ್ರತಿಕ್ರಿಯೆಗಳು ಮುಂದಿನ ದಿನಗಳಲ್ಲಿ ಅವರಿಗೆ ಸವಾಲಾಗಬಹುದು.
ಈ ಬೆಳವಣಿಗೆಯು ಮಧ್ಯಪ್ರಾಚ್ಯದ ರಾಜಕೀಯ ಪರಿಸ್ಥಿತಿಯ ಮೇಲೆ ಮತ್ತು ಅಮೆರಿಕ–ಇಸ್ರೇಲ್ ಜೊತೆಗಿನ ಇರಾನ್ ಸಂಬಂಧದ ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























